Tim David: ಅವರು ಜೊತೆಗಿರುವುದೇ ನನ್ನ ಅದೃಷ್ಟ..!

Tim David: ಅವರು ಜೊತೆಗಿರುವುದೇ ನನ್ನ ಅದೃಷ್ಟ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟಿಮ್ ಡೇವಿಡ್ (Tim David) ಮತ್ತೊಮ್ಮೆ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್​ಸಿಬಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದ ಬಳಿಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಗೌರವಕ್ಕೆ ಪಾತ್ರರಾದ ಅವರು, ತಮ್ಮ ಯಶಸ್ಸಿನ ಹಿಂದಿನ ಗುಟ್ಟು ಮತ್ತು ಮೈದಾನದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ರಜತ್ ನೀಡಿದ ಭದ್ರ ಬುನಾದಿ:

ತಮ್ಮ ಸ್ಪೋಟಕ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಟಿಮ್ ಡೇವಿಡ್, “ನನ್ನ ಪ್ರದರ್ಶನದ ಬಗ್ಗೆ ತುಂಬಾ ಸಂತೋಷವಾಗಿದೆ. ಆರಂಭದಲ್ಲಿ ನಾಯಕ ರಜತ್ ಪಾಟಿದಾರ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟುತ್ತಿದ್ದರೆ, ನಾನು ಅವರಿಗೆ ಸಾಥ್ ನೀಡುತ್ತಿದ್ದೆ. ಅವರ ಅಬ್ಬರದಿಂದಾಗಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು, ಇದು ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ನಮಗೆ ನೆರವಾಯಿತು,” ಎಂದಿದ್ದಾರೆ.

106 ಮೀಟರ್‌ಗಳ ದೈತ್ಯ ಸಿಕ್ಸರ್!

ಈ ಪಂದ್ಯದ ಪ್ರಮುಖ ಆಕರ್ಷಣೆಯೆಂದರೆ ಟಿಮ್ ಡೇವಿಡ್ ಸಿಡಿಸಿದ 106 ಮೀಟರ್ ಉದ್ದದ ಸಿಕ್ಸರ್. ಈ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅವರು, “ತರಬೇತಿ ಅವಧಿಯಲ್ಲಿ ನಾವು ಚೆಂಡನ್ನು ಸ್ಟೇಡಿಯಂನ ಛಾವಣಿಯ ಮೇಲೆ ಹೊಡೆಯುವ ಸ್ಪರ್ಧೆ ಏರ್ಪಡಿಸುತ್ತೇವೆ. ಅದಕ್ಕಾಗಿ ಕೋಚ್‌ಗಳ ಬಳಿ ಬೈಸಿಕೊಳ್ಳುವುದೂ ಉಂಟು! ಆದರೆ ಪಂದ್ಯದ ವೇಳೆ ವೇಗದ ಬೌಲಿಂಗ್‌ನಲ್ಲಿ ಅಂತಹದ್ದೇ ಒಂದು ಸಿಕ್ಸರ್ ಸಿಡಿಸಿದ್ದು ತುಂಬಾ ತೃಪ್ತಿ ನೀಡಿದೆ,” ಎಂದರು.

ಡಿಕೆ ಎಂಬ ಮಾರ್ಗದರ್ಶಕ:

ಇದೇ ವೇಳೆ ತನ್ನ ಬ್ಯಾಟಿಂಗ್ ಸುಧಾರಣೆಗೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ (DK) ಅವರ ಮಾರ್ಗದರ್ಶನ ಕಾರಣ ಎಂದು ಟಿಮ್ ಡೇವಿಡ್ ತಿಳಿಸಿದ್ದಾರೆ. “ಡಿ.ಕೆ ಅವರಂತಹ ಅನುಭವ ಇರುವ ಬ್ಯಾಟಿಂಗ್ ಕೋಚ್ ಜೊತೆಗಿರುವುದು ನನ್ನ ಅದೃಷ್ಟ. ಇಲ್ಲಿನ ಪರಿಸ್ಥಿತಿಗಳಿಗೆ ತಕ್ಕಂತೆ ಹೇಗೆ ಆಡಬೇಕು ಎಂದು ಅವರು ಕಲಿಸಿಕೊಟ್ಟಿದ್ದಾರೆ. ಮೂಲಭೂತ ತಂತ್ರಗಳನ್ನು ಮರೆಯದೆ, ಶಕ್ತಿಯುತವಾಗಿ ಹೇಗೆ ಆಡಬೇಕೆಂದು ನಾವು ಚರ್ಚಿಸುತ್ತೇವೆ,” ಎಂದು ಅವರು ಹೇಳಿದರು.

ತಂಡದ ಬೆಂಬಲ ಮತ್ತು ಆಕ್ರಮಣಕಾರಿ ಆಟ:

“ನನ್ನ ಹಿಂದೆ ಜಿತೇಶ್ ಮತ್ತು ಶೆಪ್ಪಿ (ರೊಮಾರಿಯೋ ಶೆಫರ್ಡ್) ಅವರಂತಹ ಹಿಟ್ಟರ್ಸ್ ಇದ್ದಾರೆ ಎಂಬ ಧೈರ್ಯ ನನಗಿದೆ. ಇದು ನಾನು ಯಾವುದೇ ಒತ್ತಡವಿಲ್ಲದೆ ಆಕ್ರಮಣಕಾರಿ ಕ್ರಿಕೆಟ್ ಆಡಲು ಸಹಾಯ ಮಾಡುತ್ತದೆ. ಐಪಿಎಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಆಡುತ್ತಿರುವುದರಿಂದ ಈಗ ನನ್ನ ಮೇಲೆ ನಾನು ಹೆಚ್ಚು ಒತ್ತಡ ಹೇರಿಕೊಳ್ಳುವುದಿಲ್ಲ. ಒಳ್ಳೆಯ ದಿನಗಳನ್ನು ಆನಂದಿಸುತ್ತೇನೆ ಮತ್ತು ಕೆಟ್ಟ ದಿನಗಳಿಂದ ಕಲಿಯುತ್ತೇನೆ,” ಎಂದು ಡೇವಿಡ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: VIDEO: ಓಯೇ ಸರ್ಫರಾಝ್… ವಿರಾಟ್ ಕೊಹ್ಲಿ ನಡೆಗೆ ಭಾರೀ ಮೆಚ್ಚುಗೆ

ಒಟ್ಟಾರೆಯಾಗಿ, ಟಿಮ್ ಡೇವಿಡ್ ಅವರ ಈ ಆಟ ಮತ್ತು ತಂಡದ ಸಂಘಟಿತ ಪ್ರದರ್ಶನವು ಅಭಿಮಾನಿಗಳಿಗೆ ರಸದೌತಣ ನೀಡಿದ್ದಂತೂ ಸುಳ್ಳಲ್ಲ. ಈ ರಸದೌತಣದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬದ್ಧ ವೈರಿ ಸಿಎಸ್​ಕೆ ತಂಡವನ್ನು ಮಕಾಡೆ ಮಲಗಿಸಿರುವುದು ವಿಶೇಷ.

 

Source link

Leave a Reply

Your email address will not be published. Required fields are marked *