
ಬೆಂಗಳೂರು, ಮಾರ್ಚ್ 24: ಕರ್ನಾಟಕದ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯದಾದ್ಯಂತ ಟೋಲ್ ದರಗಳನ್ನು (Toll price) ಏಪ್ರಿಲ್ 1ರಿಂದ ಶೇ 3 ರಿಂದ 5 ರವರೆಗೆ ಹೆಚ್ಚಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (National Highways Authority of India) ಮಾಹಿತಿಯ ಪ್ರಕಾರ, ಪ್ರತಿವರ್ಷದಂತೆ ಈ ಬಾರಿ ಕೂಡ ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ (WPI) ಆಧಾರಿತವಾಗಿ ಟೋಲ್ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಹೊಸ ದರಗಳನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಕರ್ನಾಟಕದ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ ಆಗುವ ಸಾಧ್ಯತೆ ಇದ್ದು, ಕೇವಲ ಕೆಲವೇ ಪ್ಲಾಜಾಗಳಲ್ಲಿ (ಸುಮಾರು 10) ಸೆಪ್ಟೆಂಬರ್ 1ರಂದು ದರ ಹೆಚ್ಚಳ ಜಾರಿಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಯಾವೆಲ್ಲ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ
ದರ ಏರಿಕೆ ಅನ್ವಯವಾಗಲಿರುವ ಪ್ರಮುಖ ಟೋಲ್ ಪ್ಲಾಜಾಗಳ ವಿವರ ಇಲ್ಲಿದೆ;
- ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು–ಮೈಸೂರು ಮಾರ್ಗ)
- ಬಾಗೇಪಲ್ಲಿ (ಬೆಂಗಳೂರು–ಹೈದರಾಬಾದ್ ಮಾರ್ಗ)
- ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ)
- ನಾಂಗ್ಲಿ (ಬೆಂಗಳೂರು–ತಿರುಪತಿ ಮಾರ್ಗ)
- ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಟಿಆರ್ಆರ್ ಮಾರ್ಗ)
ಟೋಲ್ ದರ ಏರಿಕೆ ಹೇಗೆ?
ಟೋಲ್ ದರವನ್ನು ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ (WPI) ಆಧಾರಿತವಾಗಿ ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ 2.5 ರೂ. ಅಥವಾ ಅದಕ್ಕಿಂತ ಹೆಚ್ಚು ಏರಿಕೆಯಿದ್ದರೆ, ಅದನ್ನು 5 ರೂ.ಗೆ ರೌಂಡ್ ಆಫ್ ಮಾಡಲಾಗುತ್ತದೆ. ಈ ಪರಿಷ್ಕರಣೆ 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿಗಳ ಪ್ರಕಾರ ನಡೆಯುತ್ತಿದ್ದು, ಪ್ರತೀ ಹಣಕಾಸು ವರ್ಷದ ಆರಂಭದಲ್ಲಿ ದರ ಪರಿಷ್ಕರಣೆ ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ
ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಈಗಾಗಲೇ ಟೋಲ್ ದರಗಳು ಹೆಚ್ಚಾಗಿದ್ದು, ಇದೀಗ ಮತ್ತಷ್ಟು ಏರಿಕೆಯಿಂದ ಪ್ರಯಾಣಿಕರಿಗೆ ಆರ್ಥಿಕ ಹೊರೆ ಹೆಚ್ಚಲಿದೆ. ‘ಒಂದು ಕಡೆಗಿನ ಪ್ರಯಾಣಕ್ಕೆ 180 ರೂ. ಟೋಲ್ ಈಗಾಗಲೇ ಹೆಚ್ಚು ಇದೆ, ಮತ್ತೆ ಏರಿಕೆ ಆದರೆ ಕಷ್ಟವಾಗುತ್ತದೆ’ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಪ್ರಯಾಣದ ವೆಚ್ಚ ಈಗಾಗಲೇ 2000–3000 ರೂ. ವರೆಗೆ ಇದೆ. ಟೋಲ್ ಹೆಚ್ಚಳದಿಂದ ಈ ವೆಚ್ಚ ಇನ್ನಷ್ಟು ಏರಲಿದೆ ಎಂದು ಪ್ರವಾಸಿ ವಾಹನಗಳ ಮಾಲೀಕರು ಕೂಡ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್ ನ್ಯೂಸ್: ದ್ವಿಚಕ್ರ ವಾಹನಗಳಿಗೆ ನೈಸ್ ರಸ್ತೆ ಶೀಘ್ರ ಟೋಲ್ ಮುಕ್ತ?
ಒಟ್ಟಿನಲ್ಲಿ, ಏಪ್ರಿಲ್ 1ರಿಂದ ಜಾರಿಯಾಗಲಿರುವ ಈ ಟೋಲ್ ದರ ಏರಿಕೆ ರಾಜ್ಯದ ವಾಹನ ಸವಾರರು ಮತ್ತು ಸಾರಿಗೆ ವಲಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.