ನವದೆಹಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಬಜೆಟ್ನಲ್ಲಿ ಆದ್ಯತಾ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಭಾರತದ ಭವಿಷ್ಯದ ಸೆಕ್ಟರ್ ಎನಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಗಮನ ಕೊಟ್ಟಿದ್ದಾರೆ. ಎಲೆಕ್ಟ್ರಾನಿಕ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್ನಲ್ಲಿ ಅನುದಾನದ ಪ್ರಮಾಣವನ್ನು 40,000 ಕೋಟಿ ರೂಗೆ ಏರಿಸಿವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸರ್ಕಾರವು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಆರಂಭಿಸಲಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಈ ಎರಡನೇ ಆವೃತ್ತಿಯ ಸೆಮಿಕಂಡಕ್ಟರ್ ಮಿಷನ್ನಲ್ಲಿ ಉಪಕರಣಗಳು ಮತ್ತು ವಸ್ತುಗಳ ತಯಾರಿಕೆ, ಫುಲ್ ಸ್ಟ್ಯಾಕ್ ಇಂಡಿಯನ್ ಐಪಿ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ. ಈ ಸೆಕ್ಟರ್ನ ಸಪ್ಲೈ ಚೈನ್ ಅನ್ನು ಬಲಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೊದಲು ಸರ್ಕಾರ ಆರಂಭಿಸಿದ ಸೆಮಿಕಂಡಕ್ಟರ್ ಮಿಷನ್ ಹೇಗೆ ದೇಶದಲ್ಲಿ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಾಧ್ಯವಾಯಿತು, ಮುಂಬರುವ ಎರಡನೇ ಆವೃತ್ತಿಯ ಮಿಷನ್ ಹೇಗೆ ಭಾರತಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ರೇರ್ ಅರ್ತ್ ಕಾರಿಡಾರ್ಗಳು
ಸೆಮಿಕಂಡಕ್ಟರ್ ಮಿಷನ್ ಹಾಗೂ ಇತರ ಉದ್ಯಮಗಳಿಗೆ ಬಹಳ ಅಗತ್ಯವಾಗಿರುವ ವಿರಳ ಭೂಖನಿಜಗಳಿಗಾಗಿ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಈ ವಸ್ತುಗಳಿಗಾಗಿ ಭಾರತ ಬಹುತೇಕ ಆಮದು ಮೇಲೆ ಅವಲಂಬಿತವಾಗಿದೆ. ಇದನ್ನು ತಪ್ಪಿಸಲು ದೇಶೀಯವಾಗಿ ಇವುಗಳ ಉತ್ಪಾದನೆಗೆ ಸರ್ಕಾರ ಯೋಜಿಸಿದೆ. ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ರೇರ್ ಅರ್ಥ್ ಕಾರಿಡಾರ್ ನಿರ್ಮಿಸುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಡಿಶಾ, ಕೇರಳ ಮತ್ತು ಆಂಧ್ರಪ್ರದೇಶದಂತಹ ಖನಿಜ ಸಮೃದ್ಧ ರಾಜ್ಯಗಳನ್ನೊಳಗೊಂಡ ರೇರ್ ಅರ್ಥ್ ಕಾರಿಡಾರ್ ನಿರ್ಮಿಸಲಾಗುತ್ತದೆ. ಇಲ್ಲಿ ಸಂಶೋಧನೆ ಮತ್ತು ಮೈನಿಂಗ್ಗೆ ಉತ್ತೇಜನ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಜೆಟ್ ಮಾಹಿತಿ ಕ್ಷಣಕ್ಷಣದ ಅಪ್ಡೇಟ್, ಲೈವ್ ಬ್ಲಾಗ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ