Vijay Hazare Trophy: 412 ರನ್ ಬೆನ್ನಟ್ಟಿ ಚಾಂಪಿಯನ್ ತಂಡಕ್ಕೆ ಮಣ್ಣು ಮುಕ್ಕಿಸಿದ ಕರ್ನಾಟಕ – Kannada News | Record Chase! Karnataka Beats Jharkhand by 5 Wickets in Thrilling VHT Match

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಕರ್ನಾಟಕ ತಂಡ 5 ವಿಕೆಟ್​ಗಳಿಂದ ಗೆದ್ದುಕೊಂಡು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇಂದಿನಿಂದ ಆರಂಭವಾಗಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ, ಕೆಲವೇ ದಿನಗಳ ಹಿಂದಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದು ಬೀಗಿದ್ದ ಜಾರ್ಖಂಡ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜಾರ್ಖಂಡ್ ತಂಡ ದಾಖಲೆಯ 412 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ಕೂಡ ಕೆಚ್ಚೆದೆಯ ಪ್ರದರ್ಶನ ನೀಡಿ ಇನ್ನು 15 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆಬೀರಿತು.

ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ

ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್‌ ಆಯ್ದುಕೊಂಡರು. ಆದರೆ ಜಾರ್ಖಂಡ್ ಬ್ಯಾಟರ್​ಗಳು ಕರ್ನಾಟಕದ ಆಯ್ಕೆಯನ್ನು ತಪ್ಪೆಂದು ಸಾಭೀತುಪಡಿಸಿದರು. ಜಾರ್ಖಂಡ್ ಪರ ಆರಂಭಿಕ ಶಿಖರ್ ಮೋಹನ್ 44 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. 4ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಸಿಂಗ್ ಕೂಡ 88 ರನ್​ಗಳ ಕಾಣಿಕೆ ನೀಡಿದರು.

ಐದನೇ ಕ್ರಮಾಂಕದಲ್ಲಿ ಬಂದ ಕುಶಾಗ್ರ 63 ರನ್​ಗಳ ಇನ್ನಿಂಗ್ಸ್ ಆಡಿದರೆ, 6ನೇ ಕ್ರಮಾಂಕದಲ್ಲಿ ಬಂದ ನಾಯಕ ಇಶಾನ್ ಕಿಶನ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಟೀಂ ಇಂಡಿಯಾದಲ್ಲಿ ಆರಂಭಿಕನಾಗಿ ಆಡುತ್ತಿದ್ದ ಕಿಶನ್, ತಮ್ಮ ಬ್ಯಾಟಿಂಗ್‌ ಕ್ರಮಾಂಕವನ್ನು ಬದಲಿಸಿದ್ದಾರೆ. ಇದಕ್ಕೆ ಕಾರಣ ಟೀಂ ಇಂಡಿಯಾದಲ್ಲಿ ಕಿಶನ್​ಗೆ ಆರಂಭಿಕ ಸ್ಥಾನ ಸಿಗುವುದು ಅನುಮಾನ. ಅಲ್ಲದೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಿರುವ ಕಿಶನ್​ಗೆ ಆರಂಭಿಕ ಸ್ಥಾನ ಸಿಗುವುದಿಲ್ಲ.

ಸ್ಫೋಟಕ ಶತಕ ಸಿಡಿಸಿದ ಕಿಶನ್

ಹೀಗಾಗಿ ಗೇಮ್ ಫಿನಿಶರ್ ಸ್ಥಾನವನ್ನು ಪಡೆದುಕೊಳ್ಳುವ ಗುರಿಯಲ್ಲಿರುವ ಕಿಶನ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿ, 7 ಬೌಂಡರಿ ಹಾಗೂ 14 ಭರ್ಜರಿ ಸಿಕ್ಸರ್​ಗಳ ಸಹಿತ 125 ರನ್ ಬಾರಿಸಿದರು. ಕಿಶನ್ ಶತಕದಿಂದಾಗಿ ಜಾರ್ಖಂಡ್ ತಂಡ ಕರ್ನಾಟಕದ ಮುಂದೆ 412 ರನ್​ಗಳ ಬೃಹತ್ ರನ್ ಕಲೆಹಾಕಿತು.

ಕರ್ನಾಟಕಕ್ಕೆ ಉತ್ತಮ ಆರಂಭ

ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ ದೇವದತ್ ಪಡಿಕ್ಕಲ್ ಹಾಗೂ ಮಯಾಂಕ್ ಅಗರ್ವಾಲ್ 114 ರನ್​ಗಳ ಭರ್ಜರಿ ಜೊತೆಯಾಟವನ್ನು ನೀಡಿದರು. ಇವರಿಬ್ಬರು ಕೇವಲ 11.5 ಓವರ್​ಗಳಲ್ಲಿ ತಂಡವನ್ನು ಇಷ್ಟು ಮೊತ್ತಕ್ಕೆ ಕೊಂಡೊಯ್ದರು. ಇದೇ ವೇಳೆ ನಾಯಕ ಮಯಾಂಕ್ 54 ರನ್​ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿದ ಮಯಾಂಕ್ 10 ಬೌಂಡರಿ ಕೂಡ ಬಾರಿಸಿದರು.

147 ರನ್ ಸಿಡಿಸಿದ ಪಡಿಕ್ಕಲ್

ಇತ್ತ ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್​ನಲ್ಲಿ 118 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಹಿತ 147 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ದೇವದತ್ ಔಟಾಗುವುದಕ್ಕೂ ಮುನ್ನ ಕರ್ನಾಟಕದ ಗೆಲುವು ಖಚಿತವಾದ್ದಂತ್ತಾಗಿತ್ತು. ಉಳಿದ ಕೆಲಸ ಮಾಡಿದ ಕೆ. ಶ್ರೀಕಾಂತ್ 38 ರನ್​ಗಳ ಇನ್ನಿಂಗ್ಸ್ ಆಡಿದರೆ, ಅಭಿನವ್ ಮನೋಹರ್ ಅಜೇಯ 56 ರನ್ ಮತ್ತು ಧೃವ್ ಪ್ರಭಾಕರ್ ಅಜೇಯ 40 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *