ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ 9ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾದ್ದವು. ಬಲಿಷ್ಠ ತಂಡಗಳ ನಡುವಿನ ಈ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಸ್ಮೃತಿ ಮಂಧಾನ ಪಡೆ, ಗುಜರಾತ್ ತಂಡವನ್ನು ಮಣಿಸಿ ಈ ಆವೃತ್ತಿಯಲ್ಲಿ ಸತತ ಮೂರನೇ ಜಯ ದಾಖಲಿಸಿದೆ. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆವೃತ್ತಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಆರ್ಸಿಬಿ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 183 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಮಾರಕ ದಾಳಿಗೆ ನಲುಗಿ 150 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಆರ್ಸಿಬಿ ಈ ಪಂದ್ಯವನ್ನು 32 ರನ್ಗಳಿಂದ ಗೆದ್ದುಕೊಂಡಿತು.