MLA ಪ್ರಮಾಣಪತ್ರ ಪಡೆದ ಜೀವರಾಜ್Image Credit source: Tv9 Kannada
ಚಿಕ್ಕಮಗಳೂರು, ಮೇ 04: ಭಾರಿ ಕುತೂಹಲ ಮೂಡಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಡಿ.ಎನ್. ಜೀವರಾಜ್ ಚುನಾವಣಾ ಅಧಿಕಾರಿಗಳಿಂದ ಅಂತಿಮವಾಗಿ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಆ ಮೂಲಕ ಮರುಎಣಿಕೆಯಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ನ ಟಿ.ಡಿ. ರಾಜೇಗೌಡಗೆ ಸೋಲಾಗಿದೆ. ಅಂಚೆ ಮತಗಳ ಮರು ಎಣಿಕೆ ವೇಳೆ 52 ಮತಗಳಿಂದ ಜೀವರಾಜ್ ಗೆಲುವು ಸಾಧಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಒಂದೀಗ ಬಿಜೆಪಿ ತೆಕ್ಕೆಗೆ ಬಂದಂತಾಗಿದೆ.
ಪಟ್ಟು ಹಿಡಿದು ಪ್ರಮಾಣಪತ್ರ ಪಡೆದ ಜೀವರಾಜ್
ಇನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನಿನ್ನೆ ಚುನಾವಣಾ ಆಯೋಗದಿಂದ ಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು. ಮಾಹಿತಿ ಬಂದ ಬೆನ್ನಲ್ಲೇ ನಗರದ ಬೇಲೂರು ರಸ್ತೆಯಲ್ಲಿರುವ ಚುನಾವಣಾಧಿಕಾರಿ ನಿವಾಸಕ್ಕೆ ಡಿ.ಎನ್. ಜೀವರಾಜ್ ಬಂದಿದ್ದು, ಶಾಸಕ ಸ್ಥಾನದ ಪ್ರಮಾಣಪತ್ರ ನೀಡುವಂತೆ ಕೇಳಿದ್ದಾರೆ. ಈ ವೇಳೆ ಕಚೇರಿಯಲ್ಲಿ ನೀಡೋದಾಗಿ ಚುನಾವಣಾಧಿಕಾರಿ ಹೇಳಿದರೂ, ಇಲ್ಲ ನಾನು ಬಂದಿದ್ದೇನೆ ಪ್ರಮಾಣ ಪತ್ರ ನೀಡಿ ಎಂದು ಹೇಳಿ ಕೊನೆಗೂ ಅದನ್ನು ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶೃಂಗೇರಿ ಅಂಚೆ ಮತ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸ್ಪಷ್ಟ; ಸಚಿವ ಪ್ರಲ್ಹಾದ ಜೋಶಿ
2023ರ ವಿಧಾನಸಭಾ ಚುನಾವಣೆ ಶೃಂಗೇರಿ ಕ್ಷೇತ್ರದ ಫಲಿತಾಂಶ ಭಾರಿ ಕುತೂಹಲ ಮೂಡಿಸಿತ್ತು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಅವರ ವಿರುದ್ಧ ಕೇವಲ 201 ಮತಗಳ ಅಂತರದಲ್ಲಿ ಸೋತಿದ್ದರು. ಚಲಾವಣೆಯಾಗಿದ್ದ ಒಟ್ಟು 1,822 ಅಂಚೆ ಮತಗಳ ಪೈಕಿ 279 ಮತಗಳು ತಿರಸ್ಕೃತಗೊಂಡಿದ್ದವು. ಹೀಗಾಗಿ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಜೀವರಾಜ್, ಮರು ಎಣಿಕೆಗೆ ಮನವಿ ಮಾಡಿದ್ದರು. ಆದರೆ ಅಂದಿನ ಜಿಲ್ಲಾ ಚುನಾವಣಾಧಿಕಾರಿಗಳು ಮನವಿಯನ್ನು ಪರಿಗಣಿಸದೆ ರಾಜೇಗೌಡರನ್ನು ವಿಜೇತರೆಂದು ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಂಚೆ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 10:08 am, Mon, 4 May 26