Headlines

ಅತ್ತ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ CWRC ಸೂಚನೆ: ಇತ್ತ ಸಂಧಾನ ಸೂತ್ರಕ್ಕೆ ಕರ್ನಾಟಕದ ಸಿದ್ಧತೆ – Kannada News | Cauvery Dispute: CWRC Orders Water Release to Tamil Nadu; Karnataka Prepares for High Stakes CM Level Talks on August 3

ಸಂಧಾನ ಸೂತ್ರಕ್ಕೆ ಕರ್ನಾಟಕದ ಸಿದ್ಧತೆ
Image Credit source: PTI

ಬೆಂಗಳೂರು, ಜುಲೈ 28: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ಜಲ ವಿವಾದ ಮತ್ತೆ ಸಂಘರ್ಷದ ರೂಪ ಪಡೆದಿದೆ. ರಾಜ್ಯದಲ್ಲಿ ತೀವ್ರ ಬರ ಸ್ಥಿತಿಯ ನಡುವೆಯೂ ತಮಿಳುನಾಡಿಗೆ ಮುಂದಿನ‌ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚಿಸಿದೆ. ಮತ್ತೊಂದೆಡೆ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ವಿಜಯ್​​ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮೊದಲೇ ತೀರ್ಮಾನಿಸಿದ್ದಂತೆ ಆಗಸ್ಟ್​​ 3ರ ಸಂಧಾನ ಸಭೆಗೆ ಕರ್ನಾಟಕ ಸಿದ್ಧತೆ ನಡೆಸಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದು, ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸೇರಿ ಮತ್ತಿತರ ನದಿ ನೀರು ಹಂಚಿಕೆ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ತಮಿಳುನಾಡು ಸಿಎಂಜೊತೆ ಕೆಲ ಸಚಿವರುಗಳು ಸಹ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ ಎನ್ನಲಾಗಿರುವ ಕಾರಣಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ

14 ವರ್ಷಗಳ ಬಳಿಕ ಮತ್ತೆ ಕಾವೇರಿ ವಿಚಾರವಾಗಿ ಮಾತುಕತೆ!

ಸುಪ್ರೀಂಕೋರ್ಟ್ ಸಲಹೆಯಂತೆ 2012ರ ನವೆಂಬರ್ 29ರಂದು ಕರ್ನಾಟಕ ಮತ್ತು ತಮಿಳುನಾಡು ಸಿಎಂಗಳ ನಡುವೆ ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ಖಾಸಗಿ ಹೋಟೆಲ್​​ನಲ್ಲಿ ಮಾತುಕತೆ ನಡೆದಿತ್ತು. ಅಂದಿನ ಕರ್ನಾಟಕದ ಸಿಎಂ ಜಗದೀಶ್ ಶೆಟ್ಟರ್ ಮತ್ತು ತಮಿಳುನಾಡು ಸಿಎಂ ದಿ. ಜೆ. ಜಯಲಲಿತಾ ಸಭೆಯಲ್ಲಿ ಭಾಗಿಯಾಗಿದ್ದರು. ತಮಿಳುನಾಡಿನ ಸಾಂಬಾ ಬೆಳೆಗೆ ತಕ್ಷಣ 30 ಟಿಎಂಸಿ‌ ನೀರು ಹರಿಸುವಂತೆ ಸಭೆಯಲ್ಲಿ ಜಯಲಲಿತಾ ಒತ್ತಡ ಹೇರಿದ್ದರೆ, ಆಗ್ರಹವನ್ನು ಜಗದೀಶ್​​ ಶೆಟ್ಟರ್​​ ತಿರಸ್ಕರಿಸಿದ್ದರು. ಬದಲಾಗಿ ಮೂರು ಅಂಶಗಳ ದೀರ್ಘಾವಧಿ ಪರಿಹಾರ ಸೂತ್ರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಮಾತುಕತೆ ಫಲಪ್ರದವಾಗದೇ ಮುಕ್ಕಾಲು ಗಂಟೆಯಲ್ಲೇ ಸಭೆ ಅಂತ್ಯವಾಗಿತ್ತು.

ಏನಾಗಲಿದೆ ಆಗಸ್ಟ್​​ 3ರ ಸಭೆಯ ಭವಿಷ್ಯ?

ಆಗಸ್ಟ್​​ 3ರಂದು ಉಭಯ ರಾಜ್ಯಗಳ ನಡುವೆ ಸಂಧಾನ ಸೂತ್ರಕ್ಕೆ ಸಭೆ ನಿಗದಿಯಾಗಿದೆಯಾದರೂ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದಾಗ ವಿಜಯ್​​ ಬೆಂಗಳೂರಿಗೆ ಬರ್ತಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ಬೆನ್ನಲ್ಲೇ ಕರ್ನಾಟಕದಲ್ಲಿ ಪ್ರತಿಭಟನೆಗಳು ಆರಂಭವಾಗಿರುವ ಕಾರಣಗ ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *