
ರಾಮನಗರ, (ಮಾರ್ಚ್ 31): ವೃದ್ಧೆ ಸಾವಿಗೆ ಕೋತಿಯೊಂದು ಮರುಗಿ, ಮೃತದೇಹದ ಮೇಲೆ ಮಲಗಿ ರೋಧನೆ ವ್ಯಕ್ತಪಡಿಸಿರುವ ವಿಚಿತ್ರ ಘಟನೆ ಜಿಲ್ಲೆಯ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ಚನ್ನಪಟ್ಟಣ (Channapatna) ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಮೃತದೇಹದ ಹತ್ತಿರ ಕಪಿರಾಯ ಕುಳಿತುಕೊಂಡು ಮನುಷ್ಯರ ರೀತಿ ಮುಖಕ್ಕೆ ಮುಖ ಕೊಡುತ್ತ ಕಣ್ಣೀರು ಹಾಕಿದ್ದಾನೆ. ಈ ದೃಶ್ಯ ನೋಡುಗರ ಕಣ್ಣಲ್ಲಿ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿತು.
ನಿತ್ಯ ಮನೆ ಬಳಿ ಬರುತ್ತಿದ್ದ ಕೋತಿಯನ್ನ ತಿಂಡಿ ಕೊಟ್ಟು ವೃದ್ಧೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಇಂದು (ಮಾರ್ಚ್ 31) ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಇದರಿಂದ ಕೋತಿ ವೃದ್ಧೆ ಸಾವಿಗೆ ಮೂಕರೋಧನೆ ವ್ಯಕ್ತಪಡಿಸಿದೆ. ಇದನ್ನು ಕಂಡ ಜನ ನಿಬ್ಬೆರಗಾಗಿದ್ದಾರೆ. ಇನ್ನು ಪ್ರಾಣಿಗಳಿಗೂ ಮನುಷ್ಯರ ಪ್ರೀತಿ ಅರ್ಥವಾಗುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ.