ದೈವಸ್ಥಾನಕ್ಕೆ ಸಚಿವ ತಿಮ್ಮಾಪುರ ಭೇಟಿImage Credit source: Tv9 Kannada
ಉಡುಪಿ, ಫೆಬ್ರವರಿ 09: ವಿಧಾನ ಸಭೆ ವಿಶೇಷ ಅಧಿವೇಶನದಲ್ಲಿ ಅಬಕಾರಿ ಇಲಾಖೆಯಲ್ಲಿನ ಹಗರಣ ಆರೋಪ ಭಾರಿ ಸದ್ದು ಮಾಡಿತ್ತು. ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳು ಪಟ್ಟುಹಿಡಿದಿದ್ದವು. ಈ ಬೆನ್ನಲ್ಲೇ ಸಚಿವರು ದೈವದ ಮೊರೆ ಹೋಗಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಸಮೀಪದ ಬಿಳಿಯಾರು ಧೂಮಾವತಿ ಸನ್ನಿಧಾನಕ್ಕೆ ನೇಮೋತ್ಸವ ದಿನದಂದೇ ಕುಟುಂಬ ಸಮೇತ ತಿಮ್ಮಾಪುರ ಅವರ ಭೇಟಿಯೀಗ ಗಮನ ಸೆಳೆದಿದೆ. ಇದೇ ವೇಳೆ ಸನ್ನಿಧಿಯ ನೂತನ ಗೋಪುರ ಮತ್ತು ಹೊಸ ಕಟ್ಟಡವನ್ನೂ ಅವರು ಉದ್ಘಾಟಿಸಿದ್ದಾರೆ.
ಆಪ್ತನ ಆಹ್ವಾನದ ಮೇರೆಗೆ ದೈವಸ್ಥಾನಕ್ಕೆ ಭೇಟಿ
ಆಪ್ತ ಜೀವನಶೆಟ್ಟಿ ಆಹ್ವಾನದ ಮೇರೆಗೆ ಸಚಿವ ತಿಮ್ಮಾಪುರ ಅವರು ಧೂಮಾವತಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಸಹಿತ ಬಂದು ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ವಿಪಕ್ಷಗಳು ಮಾಡಿದ್ದ ಅಬಕಾರಿ ಹಗರಣ ಆರೋಪದಲ್ಲಿ ಉಡುಪಿಯ ಬಿಳಿಯಾರು ಮೂಲದ ಜೀವನ್ ಶೆಟ್ಟಿ ಹೆಸರು ಕೂಡ ಕೇಳಿಬಂದಿತ್ತು. ಹಗರಣ ಕುರಿತಾದ ಆಡಿಯೋದಲ್ಲಿ ಸದ್ಯ ಧಾರವಾಡದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್ ಪದಾಧಿಕಾರಿಯಾಗಿರುವ ಜೀವನ್ ಶೆಟ್ಟಿ ಹೆಸರು ಉಲ್ಲೇಖವಾಗಿತ್ತು. ಸಚಿವರ ಹೆಸರಲ್ಲಿ ಜೀವನಶೆಟ್ಟಿ ಕಿರುಕುಳ ನೀಡುತ್ತಾರೆ ಎಂಬ ಮಾತುಗಳು ಅದರಲ್ಲಿದ್ದವು.
ಇದನ್ನೂ ಓದಿ: ಅಬಕಾರಿ ಸಚಿವ ತಿಮ್ಮಾಪುರಗೆ ಸಂಕಷ್ಟ; ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಇನ್ನು ದೈವಸ್ಥಾನಕ್ಕೆ ಭೇಟಿ ಬಳಿಕ ಮಾತನಾಡಿದ ಸಚಿವರು, ಜೀವನ್ ಶೆಟ್ಟಿ ಅವರು ಇಲ್ಲಿಗೆ ಬರುವಂತೆ ಕರೆದಿದ್ದಕ್ಕೆ ನಾನು ಬಂದಿದ್ದೇನೆ. ಕುಟುಂಬದ ಜೊತೆಗೆ ಬಂದು ದೈವದ ಆಶೀರ್ವಾದ ಪಡೆದಿದ್ದು, ದೈವಸ್ಥಾನದ ಕಟ್ಟಡಕ್ಕೆ ಸಹಕಾರ ಮಾಡಿದವರನ್ನು ಸನ್ಮಾನಿಸಿದ್ದೇನೆ. ಇಂತಹ ದೈವದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪಗಳೆಲ್ಲ ಸುಳ್ಳು. ಅಧಿವೇಶನದಲ್ಲಿ ಎಲ್ಲಾ ವಿಚಾರವನ್ನು ನಾನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.