Headlines

ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ನಟ ಜಯಂ ರವಿ – Kannada News | Ravi Mohan says he is not leaving cinema, asks apology to fans

ರವಿ ಮೋಹನ್ (Ravi Mohan) ಅಲಿಯಾಸ್ ಜಯಂ ರವಿ, ತಮಿಳು ಚಿತ್ರರಂಗದ ಜನಪ್ರಿಯ ನಾಯಕ ನಟ. ದೊಡ್ಡ ಸ್ಟಾರ್ ಎನಿಸಿಕೊಂಡಿಲ್ಲವಾದರೂ ಸಹ ಸಾಕಷ್ಟು ಅಭಿಮಾನಿಗಳನ್ನು, ಸಿನಿಮಾ ಅವಕಾಶಗಳನ್ನು ಹೊಂದಿರುವ ನಟ ರವಿ ಮೋಹನ್. 23 ವರ್ಷಗಳಿಂದ ನಾಯಕ ನಟನಾಗಿ ನಟಿಸುತ್ತಿರುವ ರವಿ ಮೋಹನ್, ಇತ್ತೀಚೆಗೆ ತಮ್ಮ ಖಾಸಗಿ ಬದುಕಿನ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದರು. ಪತ್ನಿ ಆರತಿ ರವಿ ಅವರೊಂದಿಗಿನ ಸಂಬಂಧ ಬಿಗಡಾಯಿಸಿದ್ದು, ಈ ಕುರಿತು ಕೆಲ ವಾರಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ, ತಮ್ಮ ವಿಶ್ವರೂಪ ಪ್ರದರ್ಶಿಸಿದ್ದರು. ಸುದ್ದಿಗೋಷ್ಠಿ ನೋಡಿದವರು ರವಿಗೆ ಮಾನಸಿಕ ಸಮಸ್ಯೆ ಎದುರಾಗಿದೆ ಎಂಬ ಆತಂಕವನ್ನು ಸಹ ವ್ಯಕ್ತಪಡಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರವಿ ಮೋಹನ್, ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಅಲ್ಲದೆ, ತಮ್ಮ ಮಕ್ಕಳ ಮೇಲೆ ಅಪಾರ ಪ್ರೇಮವಿದೆ ಎಂದು ಕಣ್ಣೀರು ಹಾಕಿದ್ದರು. ನನ್ನನ್ನು ಹಿಂಸಿಸಲಾಗಿದೆ, ನೋವು ಕೊಡಲಾಗಿದೆ, ಸತತ ಅವಮಾನಗಳನ್ನು ಎದುರಿಸಿದ್ದೇನೆ ಎಂದೆಲ್ಲ ಹೇಳಿದ್ದರು. ಜೊತೆಗೆ ತಮ್ಮ ಮೇಲೆ ಆರೋಪಗಳನ್ನು ಮಾಡುತ್ತಿರುವವರ ಮೇಲೆ ಉರಿದು ಬಿದ್ದಿದ್ದರು. ತೀರ ಭಾವುಕವಾಗಿ ಸುದ್ದಿಗೋಷ್ಠಿಯಲ್ಲಿ ರವಿ ಮೋಹನ್ ವರ್ತಿಸಿದ್ದರು.

ಆದರೆ ಇದೀಗ ರವಿ ಮೋಹನ್ ಅವರು ತಮ್ಮ ನಿರ್ಧಾರವನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ತಾವು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರವನ್ನು ಹಿಂಪಡೆಯುತ್ತಿರುವುದಾಗಿ ರವಿ ಮೋಹನ್ ಹೇಳಿದ್ದು, ತಮ್ಮ ಜೀವನವೇ ಸಿನಿಮಾ ಎಂದಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾವುಕವಾಗಿ ಮಾತನಾಡಿರುವ ರವಿ ಮೋಹನ್, ‘ನನಗೆ ಈ ವರ್ಷ 46 ವರ್ಷ ತುಂಬುತ್ತಿದೆ. 23ನ್ನು ಎರಡರಿಂದ ಭಾಗಿಸಿದರೆ ಬರುವ ಸಂಖ್ಯೆಯಷ್ಟು, ಅಂದರೆ ನನ್ನ ಅರ್ಧ ಜೀವನ ಚಿತ್ರರಂಗದಲ್ಲಿ ಕಳೆದಿದೆ. ನನ್ನ ಒಂದು ಸಣ್ಣ ತಪ್ಪಿನಿಂದಾಗಿ ನಿಮ್ಮೆಲ್ಲರಿಗೂ ಇಷ್ಟು ನೋವಾಗಿದೆಯೆಂಬುದು ದುರದೃಷ್ಟಕರ. ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಎರಡೂ ನನಗೆ 50-50, ಆದರೆ ವೈಯಕ್ತಿಕ ಜೀವನದ ಭಾವನೆಗಳು ಸ್ವಲ್ಪ ಹೆಚ್ಚಾದವು’ ಎಂದರು.

ಇದನ್ನೂ ಓದಿ:ವಿಚ್ಛೇದನ ಪಡೆದ ಬೆನ್ನಲ್ಲೇ ಖ್ಯಾತ ಗಾಯಕಿ ಜೊತೆ ರವಿ ಮೋಹನ್ ಸುತ್ತಾಟ

ಮುಂದುವರೆದು ಮಾತನಾಡಿ, ‘ನಾನು ಸ್ವಲ್ಪ ಭಾವುಕನಾಗಿದ್ದೆ, ಆದರೆ ಚಿತ್ರರಂಗದ ಪ್ರತಿಯೊಬ್ಬರೂ ನನ್ನ ಬಳಿ ಬಂದು, ‘ನೀವು ಏನೇ ಹೇಳಿದರೂ ನಾವು ಒಪ್ಪಿಕೊಳ್ಳುತ್ತೇವೆ, ಆದರೆ ನೀವು ಇನ್ನು ಮುಂದೆ ಚಿತ್ರರಂಗದ ಭಾಗವಲ್ಲ ಎಂದು ಎಂದಿಗೂ ಹೇಳಬಾರದು’ ಎಂದರು. ಅವರೆಲ್ಲರ ಬಳಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಇನ್ನು ಮುಂದೆ ನನ್ನ ಅಭಿಮಾನಿಗಳಿಗೆ ದ್ರೋಹ ಮಾಡುವುದಿಲ್ಲ. ನಾನು ಖಂಡಿತವಾಗಿಯೂ ಮರಳಿ ಬರುತ್ತೇನೆ. ನಿಮ್ಮ ಸಂತೋಷಕ್ಕಾಗಿ, ನಿಮ್ಮ ದಯೆಗಾಗಿ, ನಿಮ್ಮ ಉದಾರತೆಗಾಗಿ, ನಾನು ‘ಪೊನ್ನಿಯಿನ್ ಸೆಲ್ವನ್’ ಅಥವಾ ‘ಕರತೈ ಬಾಬು’ ಆಗಿ ಮರಳಲು ಯೋಜಿಸುತ್ತಿದ್ದೇನೆ. ನನಗೆ ಈ ಆತ್ಮವಿಶ್ವಾಸ ನೀಡಿದ ಎಲ್ಲರಿಗೂ ನಾನು ತಲೆಬಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಮೇ ತಿಂಗಳಲ್ಲಿ ತಾವು ಭಾವುಕರಾದಾಗ ಉಂಟಾದ ಪ್ರಸಂಗವು ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು ಎಂದು ಹೇಳಿದ ರವಿ ಮೋಹನ್, ‘ಇದರಿಂದ ಒಳ್ಳೆಯದೇ ಆಯಿತು ಎಂದು ನಾನು ಭಾವಿಸುತ್ತೇನೆ. ಅನೇಕರು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ನನ್ನ ಪರಿಸ್ಥಿತಿಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಬಲ್ಲ ಅನೇಕರು ನನ್ನನ್ನು ಸಂಪರ್ಕಿಸಿದರು, ಅದು ನನಗೆ ಸಂತೋಷ ತಂದಿದೆ. ನಾನು ಇಂದು ನಿಮ್ಮ ಮುಂದೆ ನಗುತ್ತಾ ನಿಂತಿದ್ದರೆ, ಅದಕ್ಕೆ ಕೇವಲ ನನ್ನ ಅಭಿಮಾನಿಗಳೇ ಕಾರಣ. ನಿಮ್ಮ ಆಶೀರ್ವಾದದೊಂದಿಗೆ, ನನ್ನ ಹೊಸ ಜೀವನ ಮುಂದುವರಿಯುತ್ತದೆ’ ಎಂದು ನಟ ಹೇಳಿದ್ದಾರೆ.

ರವಿ ಅವರು ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಪುತ್ರಿ ಆರತಿಯನ್ನು 2009 ರಲ್ಲಿ ವಿವಾಹವಾದರು. 15 ವರ್ಷಗಳ ದಾಂಪತ್ಯ ಜೀವನದ ನಂತರ 2024 ರಲ್ಲಿ ಅವರು ಬೇರ್ಪಡುತ್ತಿರುವುದಾಗಿ ಘೋಷಿಸಿದರು. ಆ ಸಮಯದಲ್ಲಿ ಗಾಯಕಿ-ಹೀಲರ್ ಕಿನೀಷಾ ಅವರ ಹೆಸರು ಅವರೊಂದಿಗೆ ತಳುಕು ಹಾಕಿಕೊಂಡಿದ್ದರೂ, ಆರಂಭದಲ್ಲಿ ಅವರಿಬ್ಬರೂ ತಾವು ಕೇವಲ ಸ್ನೇಹಿತರು ಎಂದು ಹೇಳಿಕೊಂಡಿದ್ದರು. 2025 ರಲ್ಲಿ, ಅವರು ಒಂದೇ ರೀತಿಯ ಬಣ್ಣದ ಉಡುಪುಗಳನ್ನು ಧರಿಸಿ ಮದುವೆಯೊಂದಕ್ಕೆ ಒಟ್ಟಾಗಿ ಹಾಜರಾಗುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಈಗ ರವಿ ಅವರ ‘ಕರತೈ ಬಾಬು’ ಮತ್ತು ‘ಜೀನಿ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *