ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಈಗ ಅತ್ಯಂತ ರೋಚಕ ಹಂತ ತಲುಪಿದೆ. ಗೌತಮ್ ಹಾಗೂ ಭೂಮಿಕಾ ದಂಪತಿಯಿಂದ ಹಲವು ಸಮಯದ ಹಿಂದೆ ದೂರವಾಗಿದ್ದ ಮಗಳು ಕೊನೆಗೂ ಸಿಕ್ಕಿರುವ ಸತ್ಯ ಈಗ ಪ್ರೋಮೋ ಮೂಲಕ ರಿವೀಲ್ ಆಗಿದೆ. ಇದು ವೀಕ್ಷಕರಲ್ಲಿ ಖುಷಿ ಮೂಡಿಸಿದೆ.
ಭೂಮಿಕಾಗೆ ಅವಳಿ ಮಕ್ಕಳು ಜನಿಸಿದ್ದವು. ಆದರೆ ಕ್ರೂರ ಜೆಡಿ ಸಂಚು ನಡೆಸಿ ಒಂದು ಮಗುವನ್ನು ಕಿಡ್ನ್ಯಾಪ್ ಮಾಡಿದ್ದ. ಇದಾದ ಹಲವು ಸಮಯದ ಬಳಿಕ ಗೌತಮ್ಗೆ ‘ಮಿಂಚು’ ಎಂಬ ಮುದ್ದಾದ ಹುಡುಗಿ ಸಿಕ್ಕಿದ್ದಳು. ಆಕೆ ಅನಾಥೆ ಎಂದು ಭಾವಿಸಿ ಗೌತಮ್ ದತ್ತು ಪಡೆದು ಪ್ರೀತಿಯಿಂದ ಸಾಕಿದ್ದ. ಆದರೆ, ಈಗ ಆ ಮಿಂಚು ಬೇರೆ ಯಾರೂ ಅಲ್ಲ, ಗೌತಮ್ ಮತ್ತು ಭೂಮಿಕಾ ಅವರ ಸ್ವಂತ ಮಗಳು ಎಂಬ ಮಹತ್ವದ ಸತ್ಯ ಬಯಲಾಗಿದೆ.
ಈ ಮಹಾ ಸತ್ಯವನ್ನು ಗೌತಮ್ ಕುಟುಂಬದ ಮುಂದೆ ತಂದು ನಿಲ್ಲಿಸುವುದು ಜೀ ಕನ್ನಡದ ಮತ್ತೊಂದು ಹೊಸ ಧಾರಾವಾಹಿ ‘ಕರ್ಣ’ ನಾಯಕ ಕರ್ಣ. ‘ಅಮೃತಧಾರೆ’ಯ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಕರ್ಣ ಮೆಡಿಕಲ್ ರಿಪೋರ್ಟ್ಗಳನ್ನು ಹಿಡಿದು ಗೌತಮ್ ಮನೆಗೆ ಎಂಟ್ರಿ ಕೊಡುತ್ತಾನೆ. ‘ಯಾರೋ ಈ ರಿಪೋರ್ಟ್ ಅನ್ನು ಸ್ವಾಪ್ (ಅದಲು-ಬದಲು) ಮಾಡಿರೋ ತರ ಇದೆ’ ಎಂದು ಅನುಮಾನ ವ್ಯಕ್ತಪಡಿಸುವ ಕರ್ಣ, ಬಳಿಕ ಡಿಎನ್ಎ ರಿಪೋರ್ಟ್ಗಳನ್ನು ಮ್ಯಾಚ್ ಮಾಡಿ ತೋರಿಸುತ್ತಾನೆ.
‘ನನಗೆ ಮೊದಲೇ ಆ ಮಗು ನಿಮ್ಮ ಮಗುವೇ ಆಗಿರಬಹುದು ಅನ್ನೋ ಡೌಟ್ ಇತ್ತು. ಈಗ ರಿಪೋರ್ಟ್ಗಳು ಮ್ಯಾಚ್ ಆಗ್ತಿವೆ. ಆ ಮಿಂಚು ಬೇರೆ ಯಾರೂ ಅಲ್ಲ, ನಿಮ್ಮದೇ ಮಗಳು’ ಎಂದು ಕರ್ಣ ಅಧಿಕೃತವಾಗಿ ಸಾರುತ್ತಾನೆ.
ಮಗುವಿನ ಕೈ ಮೇಲಿನ ಆ ಗುರುತು
ಸತ್ಯ ಕೇಳಿ ಇಡೀ ಕುಟುಂಬ ಆಶ್ಚರ್ಯಚಕಿತರಾದಾಗ, ಕರ್ಣ ಮತ್ತೊಂದು ಮುಖ್ಯವಾದ ಸುಳಿವು ನೀಡುತ್ತಾನೆ. ‘ಆ ಮಗುವಿನ ಕೈ ಮೇಲೇನಾದರೂ ಮಚ್ಚೆ ಇತ್ತಾ?” ಎಂದು ಪ್ರಶ್ನಿಸುತ್ತಾನೆ. ತಕ್ಷಣವೇ ಭೂಮಿಕಾ ಹಾಗೂ ಗೌತಮ್ಗೆ ತಮ್ಮ ಮಗುವಿನ ಕೈ ಮೇಲಿದ್ದ ತ್ರಿಶೂಲದ ಆಕಾರದ ಮಚ್ಚೆ ನೆನಪಿಗೆ ಬರುತ್ತದೆ. ಇದರಿಂದಾಗಿ ಮಿಂಚು ತಾವೇ ಕಳೆದುಕೊಂಡ ಮಗಳು ಎಂಬುದು ನೂರಕ್ಕೆ ನೂರರಷ್ಟು ಖಚಿತವಾಗುತ್ತದೆ. ಇತ್ತ ಮಗುವಿನ ಸತ್ಯ ಬಯಲಾಗುತ್ತಿದ್ದಂತೆ ಸದಾ ಸಂಚು ರೂಪಿಸುತ್ತಿದ್ದ ಜೆಡಿಗೆ ತಕ್ಕ ಶಾಸ್ತಿ ಕಾದಂತಿದೆ.
ಇದನ್ನೂ ಓದಿ: ಅಮೃತಧಾರೆ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ
ಇಷ್ಟು ದಿನ ತನ್ನದೇ ಮಗಳನ್ನು ದತ್ತು ಪುತ್ರಿ ಎಂದು ಸಾಕುತಿದ್ದ ಗೌತಮ್ಗೆ ಈಗ ಅವಳೇ ತನ್ನ ಕಂದ ಎಂಬ ಸತ್ಯ ತಿಳಿದಾಗ ಆಗುವ ಭಾವುಕ ಕ್ಷಣಗಳನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.