ಶಂಕಿತ ಉಗ್ರ ಸುಹೇಲ್ ಹಾಗೂ ಅಯೋಧ್ಯೆಯ ರಾಮ ಮಂದಿರImage Credit source: tv9
ದಾವಣಗೆರೆ, ಜೂನ್ 24: ದಾವಣಗೆರೆ (Davanagere) ಜಿಲ್ಲೆಯ ಹರಿಹರದಲ್ಲಿ ಮಂಗಳವಾರ ಬಂಧಿಸಲಾಗಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನ ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾದ 20 ವರ್ಷದ ಶಂಕಿತ ಉಗ್ರ ಸುಹೇಲ್, ತನಿಖಾಧಿಕಾರಿಗಳ ಮುಂದೆ ಅತ್ಯಂತ ಭಯಾನಕ ಸಂಚನ್ನು ಒಪ್ಪಿಕೊಂಡಿದ್ದಾನೆ. ‘ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆ’ ಎಂದು ಈತ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ.
ಮುಖ್ಯಾಂಶಗಳು
- ರಾಮ ಮಂದಿರ ಸ್ಫೋಟಿಸಲು ಉಗ್ರನ ಸ್ಕೆಚ್.
- ಮೊಬೈಲ್ನಲ್ಲಿ ಪಾಕಿಸ್ತಾನದ ಲಿಂಕ್ ಪತ್ತೆ.
- ಮಾರಕಾಸ್ತ್ರಗಳೊಂದಿಗೆ ಪೋಟೋ ತೆಗೆಸಿಕೊಂಡಿದ್ದ ಸುಹೇಲ್.
ಪ್ಯಾಕ್ಟರಿ ಪೇಂಟರ್ ಸೋಗಿನಲ್ಲಿ ಅಡಗಿದ್ದ ಉಗ್ರ
ಬಂಧಿತ ಶಂಕಿತ ಉಗ್ರ ಸುಹೇಲ್ ಹರಿಹರ ಪಕ್ಕದ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯೊಂದರಲ್ಲಿ ಸಾಮಾನ್ಯ ಪೇಂಟಿಂಗ್ ಕೆಲಸಗಾರನಾಗಿ ಸೇರಿಕೊಂಡು ಯಾರಿಗೂ ಅನುಮಾನ ಬಾರದಂತೆ ಅಡಗಿಕೊಂಡಿದ್ದ. ಈತನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಅಂತಾರಾಷ್ಟ್ರೀಯ ಉಗ್ರ ಜಾಲದೊಂದಿಗೆ ನಂಟು
ಪೊಲೀಸರು ಈತನ ಮೊಬೈಲ್ ಫೋನ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂತಾರಾಷ್ಟ್ರೀಯ ಉಗ್ರ ಜಾಲದೊಂದಿಗೆ ಹೊಂದಿದ್ದ ಸಂಪರ್ಕದ ಪ್ರಮುಖ ಸುಳಿವುಗಳು ಲಭ್ಯವಾಗಿವೆ. ಈತನ ಫೋನ್ನಲ್ಲಿ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯೊಂದು ‘ರಾಣಾ ಬಾಯ್’ ಎಂಬ ಹೆಸರಿನಲ್ಲಿ ಸೇವ್ ಆಗಿರುವುದು ಪತ್ತೆಯಾಗಿದೆ.
ಸೋಷಿಯಲ್ ಮೀಡಿಯಾ ಉಗ್ರ ಜಾಲದ ಸದಸ್ಯ
ತನಿಖೆಯ ವೇಳೆ ಸುಹೇಲ್ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುವ ಅಂತರ್ಜಾಲದ ರಹಸ್ಯ ಗುಂಪುಗಳಾದ ‘MEMON & JUTTU- 333’ ಹಾಗೂ ‘RANABHAI 333’ ಗ್ರೂಪ್ಗಳಲ್ಲಿ ಸಕ್ರಿಯ ಸದಸ್ಯನಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ವೃತ್ತಿಪರ ಉಗ್ರರನ್ನು ಹೋಲುವ ರೀತಿಯಲ್ಲಿ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಪೋಸ್ ನೀಡಿ ತೆಗೆಸಿಕೊಂಡಿದ್ದ ಹಲವಾರು ಫೋಟೋಗಳು ಈತನ ಮೊಬೈಲ್ ಗ್ಯಾಲರಿಯಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ: ಪಾಕ್ ಸಂಘಟನೆಗಳ ಜೊತೆ ನಂಟು, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್
ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಹಾಗೂ ಸಮಾಜ ಘಾತಕ ಚಟುವಟಿಕೆಗಳನ್ನು ನಡೆಸಿ ಸಾವು-ನೋವು ಸೃಷ್ಟಿಸಲು ಈತ ಮತ್ತು ಈತನ ತಂಡ ಸಂಚು ರೂಪಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಮಂಗಳವಾರ ಸಂಜೆ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ