ಲಖನೌ, ಜುಲೈ 01: ರಾಮಮಂದಿರದ ಕಾಣಿಕೆ ಹಣ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಕಳವು ಮಾಡಿದ ಹಣವನ್ನು ಮೊದಲು ಮಂದಿರದ ಶೌಚಾಲಯಗಳಲ್ಲಿ ತಾತ್ಕಾಲಿಕವಾಗಿ ಅಡಗಿಸಿಡಲಾಗುತ್ತಿತ್ತು. ನಂತರ ಸೂಕ್ತ ಸಮಯ ಸಿಕ್ಕಾಗ ಅಲ್ಲಿಂದ ಹೊರಗೆ ಸಾಗಿಸಲಾಗುತ್ತಿತ್ತು. ಈ ಮೂಲಕ ಸಿಸಿಟಿವಿ ಕಣ್ಗಾವಲು ತಪ್ಪಿಸಲು ಆರೋಪಿಗಳು ಯೋಜಿತವಾಗಿ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಟ್ರಸ್ಟಿ ಹೆಸರೂ ಪ್ರಸ್ತಾಪ!
ನ್ಯಾಯಾಲಯದ ಅನುಮತಿ ಬಳಿಕ, ಬಂಧಿತರಾಗಿರುವ ಎಂಟು ಆರೋಪಿಗಳ ಪೈಕಿ ಅವಿನಾಶ್ ಶುಕ್ಲಾನನ್ನು ಸುಮಾರು ಎರಡು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ಹಣವನ್ನು ಕಳ್ಳತನ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಅಲ್ಲದೆ ಕಳ್ಳತನದ ಸಂಪೂರ್ಣ ವಿಧಾನವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಅವಿನಾಶ್ ಶುಕ್ಲಾ, ಮಂದಿರದ ಟ್ರಸ್ಟಿ ಅನಿಲ್ ಮಿಶ್ರಾ ಅವರ ಹೆಸರನ್ನೂ ಪ್ರಸ್ತಾಪಿಸಿದ್ದು, ಕಾಣಿಕೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ಹೇಳಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ; ಹಣ ಎಣಿಸುವಾಗ ನಿಯಮಗಳನ್ನು ಹೇಗೆ ಉಲ್ಲಂಘಿಸಲಾಯಿತು?
ಆರೋಪಿ ಹೇಳಿಕೆಯಂತೆ, ಕಾಣಿಕೆ ಹಣ ಎಣಿಕೆ ಕೊಠಡಿಯ ಒಂದು ಕೀ ತಿನ್ನು ಯಾದವ್ ಬಳಿ ಇದ್ದರೆ, ಮತ್ತೊಂದು ಕೀ ಬ್ಯಾಂಕ್ ಸಿಬ್ಬಂದಿ ಬಳಿ ಇತ್ತು. ಕಳ್ಳತನದ ವೇಳೆ ಒಬ್ಬ ವ್ಯಕ್ತಿ ಹಣವನ್ನು ತೆಗೆದುಕೊಳ್ಳುತ್ತಿದ್ದರೆ, ಉಳಿದವರು ಆತನನ್ನು ಸುತ್ತುವರಿದು ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದರು. ಮಂದಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಸ್ಥಳದ ಬಗ್ಗೆ ಆರೋಪಿಗಳಿಗೆ ಸಂಪೂರ್ಣ ಮಾಹಿತಿ ಇದ್ದುದರಿಂದ, ಕ್ಯಾಮೆರಾ ಕಣ್ಣಿಗೆ ಬೀಳದಂತೆ ಹಣವನ್ನು ಸಾಗಿಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಕಳವು ಹಣದಿಂದ ಭೂಮಿ, ಮನೆ ಖರೀದಿ
ಕಳವು ಮಾಡಿದ ಹಣವನ್ನು ಭೂಮಿ ಮತ್ತು ಮನೆ ಖರೀದಿಸಲು ಬಳಸಲಾಗಿದೆ ಎಂದು ಅವಿನಾಶ್ ಶುಕ್ಲಾ ವಿಚಾರಣೆ ವೇಳೆ ಹೇಳಿದ್ದಾನೆ. ಹೀಗಾಗಿ ಆರೋಪಿಗಳ ಆಸ್ತಿ ಹಾಗೂ ಹಣಕಾಸಿನ ವಹಿವಾಟಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದೇಗುಲದ ಹುಂಡಿ ಹಣ ಕಳ್ಳತನ ಆರೋಪದ ಹಿನ್ನೆಲೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ದಾಖಲಾಗುವ ಮೊದಲೇ, ಜೂನ್ 5ರಂದು ಅವಿನಾಶ್ ಶುಕ್ಲಾ ಮನೆಯಿಂದ 58 ಲಕ್ಷವನ್ನು ಟ್ರಸ್ಟ್ ವಶಪಡಿಸಿಕೊಂಡಿತ್ತು ಎಂಬ ಮಾಹಿತಿಯೂ ಈ ವೇಳೆ ಬೆಳಕಿಗೆ ಬಂದಿದೆ. ಇದರಿಂದ, ಕಾನೂನು ಪ್ರಕ್ರಿಯೆ ಆರಂಭವಾಗುವ ಮುನ್ನವೇ ದುರ್ಬಳಕೆಯಾದ ಹಣವನ್ನು ಮರುಪಡೆಯುವ ಪ್ರಯತ್ನಗಳು ನಡೆದಿದ್ದವು ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 11:48 am, Wed, 1 July 26