ಲಕ್ನೋ, ಜೂನ್ 26: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದ ಕಾಣಿಕೆ ಹಾಗೂ ದೇಣಿಗೆ ಹಣದ ಕಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಭಾರಿ ಕಾರ್ಯಾಚರಣೆ ನಡೆಸಿದೆ. ಪ್ರಕರಣದಲ್ಲಿ ನೇರವಾಗಿ ಹೆಸರಿಸಲಾದ 8 ಪ್ರಮುಖ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ಕೂಡ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಿಕ್ಕಿಬಿದ್ದ ಚಂಪತ್ ರಾಯ್ ಆಪ್ತ ಸಹಾಯಕ ‘ಟಿನ್ನು ಯಾದವ್’
ಬಂಧಿತರಾಗಿರುವ ಎಂಟು ಆರೋಪಿಗಳಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಸಹಾಯಕ (PA) ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿರುವುದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ಇವನೊಂದಿಗೆ ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಲವ್ ಕುಶ್ ಮಿಶ್ರಾ, ರಾಮ ಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳೆಲ್ಲರೂ ದೇವಸ್ಥಾನದ ಕಾಣಿಕೆ ಮತ್ತು ನಗದು ಹಣವನ್ನು ಎಣಿಕೆ ಮಾಡುವ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದ್ದ ತಂಡದಲ್ಲಿದ್ದರು. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಬಲವಾದ ಸಾಕ್ಷ್ಯಗಳು ಮತ್ತು ವಿಧಿವಿಜ್ಞಾನ ಪುರಾವೆಗಳ ಆಧಾರದ ಮೇಲೆ ಈ ಎಂಟು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾದ ಕೇವಲ ಒಂದು ದಿನದಲ್ಲೇ ಪೊಲೀಸರು ಈ ಬಂಧನದ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಓದಿ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಮ ಮಂದಿರ ದೇಣಿಗೆ ಹಗರಣ, ಸಿಬಿಐ ತನಿಖೆಗೆ ಕೋರಿ ಅರ್ಜಿ
ಮುಂದಿನ ನಡೆ: ಮುಂಬರುವ ದಿನಗಳಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಇನ್ನು ಹಲವು ಅಧಿಕಾರಿಗಳು ಮತ್ತು ನೌಕರರ ಬಂಧನವಾಗುವ ಸಾಧ್ಯತೆಯಿದೆ. ಆದರೆ, ಪ್ರಸ್ತುತ ಚಂಪತ್ ರಾಯ್ ಅಥವಾ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ವಿರುದ್ಧ ಇದುವರೆಗೆ ಯಾವುದೇ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ.
ಅಪರಾಧಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ, ಯೋಗಿ ಸರ್ಕಾರ ಎಚ್ಚರಿಕೆ
ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಈ ವಿಷಯವು ಭಾರಿ ಜಿದ್ದಾಜಿದ್ದಿನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ, ಇದು ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ. ಮೊದಲಿನಿಂದಲೂ ನಮ್ಮ ಸರ್ಕಾರ ಅಪರಾಧಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿದೆ. ರಾಮ ಮಂದಿರದ ಪವಿತ್ರ ದೇಣಿಗೆಯಲ್ಲಿ ತಪ್ಪು ಮಾಡಿರುವ ಯಾವುದೇ ಅಪರಾಧಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಅವರಿಗೆ ಕಠಿಣ ಶಿಕ್ಷೆ ಖಂಡಿತ ಎಂದು ಭರವಸೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷಗಳು
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇವಸ್ಥಾನದಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ, ಈಗ ಕೇವಲ ಸಣ್ಣ ನೌಕರರನ್ನು ಬಂಧಿಸಿ ಅಸಲಿ ಸಾಕ್ಷ್ಯಗಳನ್ನು ನಾಶಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಮಾತನಾಡಿ, ಸರ್ಕಾರ ಕೇವಲ ಹೆಸರಿಗಷ್ಟೇ ಔಪಚಾರಿಕವಾಗಿ ಎಫ್‌ಐಆರ್ ದಾಖಲಿಸಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷವು, ರಾಮ ಮಂದಿರದ ದೇಣಿಗೆ ಕಳ್ಳತನವು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ, ಈ ವಿಷಯದಲ್ಲಿ ಬಿಜೆಪಿ ಸಂಪೂರ್ಣ ಅಸಹಾಯಕವಾಗಿದೆ ಎಂದು ಟೀಕಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ