
ಕೋಲಾರ, ಏಪ್ರಿಲ್ 10: ಅರಣ್ಯ ಭೂಮಿ ಒತ್ತುವರಿ (Land Encroachment) ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಭೂಮಿಯನ್ನು ಬಿಟ್ಟುಕೊಡುವಂತೆ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಾಧಿಕಾರಿಗಳ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ಗೆ ಹಿನ್ನಡೆಯಾಗಿದೆ. ಜೊತೆಗೆ ಅವರು ಸಲ್ಲಿಸಿದ ಮೇಲ್ಮನವಿಗೆ ಅರ್ಹತೆ ಇಲ್ಲವೆಂದು ವಜಾಗೊಳಿಸಲಾಗಿದೆ.
ಅರಣ್ಯ ಇಲಾಖೆಗೆ ಭೂಮಿ ಬಿಟ್ಟುಕೊಡುವಂತೆ ಆದೇಶ
ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ಕುಮಾರ್ ಸಲ್ಲಿಸಿದ ಮೇಲ್ಮನವಿ ಅಜಿ ವಿಚಾರಣೆ ಮಾಡಿದ ನ್ಯಾಯಾಲಯ, ಅರಣ್ಯ ಇಲಾಖೆಗೆ ಭೂಮಿ ಬಿಟ್ಟುಕೊಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಕಾಯ್ದೆಯ 64(A) ವಿಧಿಯಡಿ ಒತ್ತುವರಿ ತೆರವುಗೊಳಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ. 2025ರ ಜನವರಿ 15 ಮತ್ತು 16ರಂದು ನಡೆಸಿದ ಜಂಟಿ ಸಮೀಕ್ಷೆಯ ವರದಿ ಆಧರಿಸಿ ಈ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ಮತ್ತೆ ಭೂಸಂಕಷ್ಟ? ಜ. 15 ರೊಳಗೆ ಸರ್ವೆ ಮುಗಿಸಲು ಹೈಕೋರ್ಟ್ ಆದೇಶ
ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳೊಳಗೆ ಅತಿಕ್ರಮಣ ಮಾಡಲಾದ ಭೂಮಿಯನ್ನು ಶಾಂತಿಯುತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಆದೇಶ ಪಾಲನೆ ಮಾಡದಿದ್ದಲ್ಲಿ, ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಭೂಮಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಏನಿದು ಪ್ರಕರಣ?
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 2 ದಶಕಗಳಿಂದ ಅರಣ್ಯ ಭೂಮಿಯ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಹುಟ್ಟೂರಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿರುವ ಸರ್ವೆ ಸಂಖ್ಯೆ 1 ಮತ್ತು 2ರಲ್ಲಿ 60.23 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ
ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದ ಭೂಮಿಯ ಪೈಕಿ ಸುಮಾರು 60.23 ಎರಕೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಜಂಟಿ ಸರ್ವೇ ಕಾರ್ಯದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಜಂಟಿ ಸರ್ವೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.