Headlines

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು, ಸಹ ಪೈಲಟ್ ಪಾರು – Kannada News | 5 Air Force personnel killed co pilot survives in AN 32 aircraft crash in Assam’s Jorhat Air Base

ಜೋರ್ಹತ್, ಜೂನ್ 13: ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಇಂದು ಸಂಭವಿಸಿದ AN-32 ಸಾರಿಗೆ ವಿಮಾನ ಅಪಘಾತದಲ್ಲಿ ಭಾರತೀಯ ವಾಯುಪಡೆಯ (IAF) 5 ಜನ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. “ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ AN-32 ಸಾರಿಗೆ ವಿಮಾನದ ಅಪಘಾತದಲ್ಲಿ ಭಾರತೀಯ ವಾಯುಪಡೆಯ ಐವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದ ಸಹ-ಪೈಲಟ್ ಅದೃಷ್ಟವಶಾತ್ ಬದುಕುಳಿದಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ವಾಯುಪಡೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ವಾಯುಪಡೆಯು ‘ಕೋರ್ಟ್ ಆಫ್ ಇನ್‌ಕ್ವೈರಿ’ಗೆ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆಯ ವಿಮಾನವು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹಾರಾಟ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದ ಸ್ಥಳ ನಿರ್ವಹಣಾ ಸಿಬ್ಬಂದಿ ಈಗಾಗಲೇ ಘಟನಾ ಸ್ಥಳದಲ್ಲಿದ್ದು, ಪ್ರಾಥಮಿಕ ತನಿಖೆಗಳನ್ನು ನಡೆಸಲಾಗುತ್ತಿದೆ ಎಂದು ಐಎಎಫ್ ತಿಳಿಸಿದೆ.

ಈ ವಿಮಾನವು ಜೋರ್ಹತ್ ವಾಯುನೆಲೆಯಿಂದ ಟೇಕ್-ಆಫ್ ಆಗುವ ಸಂದರ್ಭದಲ್ಲಿ ಅಥವಾ ಲ್ಯಾಂಡಿಂಗ್ ಮಾಡಲು ಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವಿಮಾನ ಪತನಗೊಂಡ ತಕ್ಷಣವೇ ಅದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದ ತೀವ್ರತೆಗೆ ವಿಮಾನದಲ್ಲಿದ್ದ ಐವರು ಐಎಎಫ್ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಮಾನವು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಇಂಧನ ಟ್ಯಾಂಕ್ ಸ್ಫೋಟಗೊಂಡಿದ್ದರಿಂದ, ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ವಿಮಾನದ ಬಹುತೇಕ ಭಾಗ ಸುಟ್ಟು ಭಸ್ಮವಾಗಿತ್ತು.

ಇದನ್ನೂ ಓದಿ: ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಭಾರತೀಯ ಪ್ರಜೆಯ ದುರಂತ ಸಾವು

ಈ ದುರಂತದಲ್ಲಿ ಮೃತಪಟ್ಟ ವಾಯುಪಡೆಯ ಸಿಬ್ಬಂದಿಗಳನ್ನು ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರವಾಯು ಖೇಮಾರಾಮ್ ಕುಮಾವತ್ ಮತ್ತು ದಾನಿಶ್ ಆಲಂ ಎಂದು ಗುರುತಿಸಲಾಗಿದೆ. “ಭಾರತೀಯ ವಾಯುಪಡೆಯು ಮೃತರ ಕುಟುಂಬಸ್ಥರಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ. ಈ ದುಃಖದ ಸಮಯದಲ್ಲಿ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಐಎಎಫ್ ತಿಳಿಸಿದೆ.

ಜೋರ್ಹತ್ ವಾಯುನೆಲೆಯಲ್ಲಿ ಸಂಭವಿಸಿದ ಅಪಘಾತದ ನಂತರದ ಪರಿಸ್ಥಿತಿಯನ್ನು ತೋರಿಸುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ದೃಶ್ಯಗಳಲ್ಲಿ ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಮೇಲೇಳುತ್ತಿರುವುದು ಕಂಡುಬಂದಿದ್ದು, ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ತುರ್ತು ಕಾರ್ಯಾಚರಣೆಯನ್ನು ಆರಂಭಿಸಿವೆ. ವರದಿಗಳ ಪ್ರಕಾರ, ಈ ವಿಮಾನವು ನೆಲಕ್ಕೆ ಅಪ್ಪಳಿಸಿದ ತಕ್ಷಣ ಅದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ಟೇಕ್​ಆಫ್ ವೇಳೆ ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ!

AN-32 ಎಂಬುದು ಸೋವಿಯತ್ ಒಕ್ಕೂಟದ (ರಷ್ಯಾ) ಕಾಲದ ಅವಳಿ-ಎಂಜಿನ್ ಹೊಂದಿರುವ ಟರ್ಬೊಪ್ರಾಪ್ ಸಾರಿಗೆ ವಿಮಾನವಾಗಿದ್ದು, ಇದು 1980ರ ದಶಕದಲ್ಲಿ ಭಾರತೀಯ ಸೇವೆಗೆ ಸೇರ್ಪಡೆಗೊಂಡಿತು. ಕಠಿಣ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಈ ವಿಮಾನವನ್ನು ಸೈನಿಕರು, ಅಗತ್ಯ ಸಾಮಗ್ರಿಗಳು ಮತ್ತು ಮಿಲಿಟರಿ ಉಪಕರಣಗಳ ಸಾಗಣೆಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಈ ವಿಮಾನವು ಸುಮಾರು 40ರಿಂದ 50 ಪ್ರಯಾಣಿಕರನ್ನು ಅಥವಾ 7.5 ಟನ್‌ಗಳಷ್ಟು ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಭಾರತೀಯ ವಾಯುಪಡೆಯು ಪ್ರಸ್ತುತ ಸುಮಾರು 105ರಷ್ಟು AN-32 ವಿಮಾನಗಳ ಉನ್ನತ ಫ್ಲೀಟ್ ಅನ್ನು ನಿರ್ವಹಿಸುತ್ತಿದ್ದು, ಅವುಗಳಲ್ಲಿ ಹಲವನ್ನು ಆಧುನೀಕರಿಸಲಾಗಿದೆ. ಸುಮಾರು 35 ವಿಮಾನಗಳನ್ನು ಉಕ್ರೇನ್ ಮೂಲದ ‘ಉಕ್ರ್‌ಸ್ಪೆಟ್ಸ್‌ಎಕ್ಸ್‌ಪೋರ್ಟ್’ ಸಂಸ್ಥೆಯು ಮೇಲ್ದರ್ಜೆಗೆ ಏರಿಸಿದ್ದರೆ, ಉಳಿದ ವಿಮಾನಗಳ ಆಧುನೀಕರಣ ಕಾರ್ಯವನ್ನು ಭಾರತದಲ್ಲೇ ಸ್ವದೇಶಿಯಾಗಿ ಕೈಗೊಳ್ಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:18 pm, Sat, 13 June 26

Source link

Leave a Reply

Your email address will not be published. Required fields are marked *