ಅಹಮದಾಬಾದ್, ಜುಲೈ 07: ದೇಶವನ್ನೇ ನಡುಗಿಸಿದ್ದ 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ(Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಎಲ್ಲಾ 38 ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಒಮ್ಮತದಿಂದ ಎತ್ತಿಹಿಡಿದಿದೆ. ಇದರೊಂದಿಗೆ ಪ್ರಕರಣದಲ್ಲಿದ್ದ ಇತರ 11 ಭಯೋತ್ಪಾದಕರ ಜೀವಾವಧಿ ಶಿಕ್ಷೆಯನ್ನು ಸಹ ನ್ಯಾಯಾಲಯ ಕಾಯ್ದುಕೊಂಡಿದೆ.
ಇದೇ ವೇಳೆ, ಸ್ಫೋಟದಲ್ಲಿ ಮೃತರಾದ 56 ಜನರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಗಾಯಗೊಂಡ 200ಕ್ಕೂ ಹೆಚ್ಚು ಸಂತ್ರಸ್ತರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆಯೂ ಹೈಕೋರ್ಟ್ ಆದೇಶಿಸಿದೆ.
ಏನಿದು ಘಟನೆ?
ಜುಲೈ 26, 2008 ರಂದು ಗುಜರಾತ್ನ ಅಹಮದಾಬಾದ್ನಾದ್ಯಂತ ಕೇವಲ 70 ನಿಮಿಷಗಳ ಅವಧಿಯಲ್ಲಿ 20 ವಿವಿಧ ಸ್ಥಳಗಳಲ್ಲಿ ಬರೋಬ್ಬರಿ 21 ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಇಡೀ ನಗರವನ್ನು ಭೀತಿಯಲ್ಲಿ ಮುಳುಗಿಸಿದ್ದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ 56 ಅಮಾಯಕರು ಜೀವ ಕಳೆದುಕೊಂಡಿದ್ದರು ಮತ್ತು 200 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ‘ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ’ (Huji) ಎಂಬ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು.
ಮತ್ತಷ್ಟು ಓದಿ: ಬೀದರ್ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ! ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಗಂಭೀರ ಗಾಯ
ದೆಹಲಿ ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟ ತನಿಖೆಯೂ ಚುರುಕು
ಮತ್ತೊಂದೆಡೆ, ದೆಹಲಿಯ ಕೆಂಪು ಕೋಟೆ ಬಳಿ ನಡೆದಿದ್ದ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತೀವ್ರಗೊಳಿಸಿದೆ. ಸ್ಫೋಟದ ತೀವ್ರತೆಗೆ ಸಿಲುಕಿ ಮೃತಪಟ್ಟವರ ದೇಹದ ಭಾಗಗಳಿಗೆ ಸಂಬಂಧಿಸಿದ ಪ್ರಮುಖ ವಿಧಿವಿಜ್ಞಾನ (FSL) ವರದಿಯನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ದಾಳಿಯ ಸ್ವರೂಪ: ಅತಿ ಹೆಚ್ಚು ತೀವ್ರತೆಯ ವಾಹನ ಆಧಾರಿತ ಸುಧಾರಿತ ಸ್ಫೋಟಕ ಸಾಧನ ಬಳಸಿ ನಡೆಸಲಾದ ಈ ಕಾರು ಬಾಂಬ್ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದರು ಮತ್ತು ಸಾರ್ವಜನಿಕ ಆಸ್ತಿಗೆ ಭಾರಿ ಹಾನಿಯಾಗಿತ್ತು.
ಭಯೋತ್ಪಾದಕ ಸಂಘಟನೆ ‘ಅನ್ಸಾರ್ ಗಜಾವತ್ ಉಲ್ ಹಿಂದ್’ ಜೊತೆ ಸಂಪರ್ಕ ಹೊಂದಿದ್ದ ಜಮೀರ್ ಅಹ್ಮದ್ ಅಹಂಗರ್ ಮತ್ತು ತುಫೈಲ್ ಅಹ್ಮದ್ ಭಟ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಫೆಬ್ರವರಿ 2026 ರಲ್ಲಿ ಬಂಧಿಸಲಾಗಿದ್ದು, ಸದ್ಯ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಶಸ್ತ್ರಾಸ್ತ್ರ ಸರಬರಾಜು: ಆರೋಪಿಗಳಾದ ಜಮೀರ್ ಮತ್ತು ತುಫೈಲ್ ದೇಶದ ವಿವಿಧೆಡೆ ದಾಳಿ ನಡೆಸಲು ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿದ್ದರು ಎಂದು ಎನ್ಐಎ ತನ್ನ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಿದೆ. ನ್ಯಾಯಾಲಯವು ವಿಧಿವಿಜ್ಞಾನ ವರದಿಯ ಮುಂದಿನ ಪರಿಶೀಲನೆಗಾಗಿ ಜುಲೈ 13 ರ ದಿನಾಂಕವನ್ನು ನಿಗದಿಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ