ಆಟೋ ಚಾಲಕ ಕೇಳಿದ್ದಕ್ಕೆ ಲ್ಯಾಂಬೋರ್ಗಿನಿ ಕೀಯನ್ನೇ ಕೊಟ್ಟ ಉದ್ಯಮಿImage Credit source: rakesh_knv Instagram
ಬೆಂಗಳೂರು, ಜುಲೈ 05: ಒಂದು ಸಾಮಾನ್ಯ ಮಾತುಕತೆ ಅಚ್ಚರಿಯ ಕ್ಷಣವಾಗಿ ಮಾರ್ಪಟ್ಟಿದ್ದು, ಉದ್ಯಮಿ ತಮ್ಮ ಲ್ಯಾಂಬೋರ್ಗಿನಿ (Lamborghini) ಸೂಪರ್‌ಕಾರಿನ ಕೀ ಅನ್ನು ಆಟೋ ಚಾಲಕನಿಗೆ ನೀಡಿ ಕಾರು ಓಡಿಸುವ ಅವಕಾಶ ಕಲ್ಪಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಪರೂಪದ ಮಾನವೀಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿಯನ್ನು ಅಪರಿಚಿತ ವ್ಯಕ್ತಿಗೆ ಚಾಲನೆ ಮಾಡಲು ನೀಡಿದ ಉದ್ಯಮಿಯ ವಿಶ್ವಾಸವನ್ನು ಅನೇಕರು ಶ್ಲಾಘಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಏನಿದೆ?
ವಿಡಿಯೊದಲ್ಲಿ ಉದ್ಯಮಿ ತಮ್ಮ ಲ್ಯಾಂಬೋರ್ಗಿನಿಯನ್ನು ಬೆಂಗಳೂರಿನ ರಸ್ತೆಯಲ್ಲಿ ಚಲಾಯಿಸುತ್ತಿರುವಾಗ, ಪಕ್ಕದಲ್ಲಿ ಬಂದ ಆಟೋ ಚಾಲಕ ಅವರನ್ನು ಗುರುತಿಸುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೊಗಳನ್ನು ನೋಡುತ್ತಿದ್ದೇನೆ ಎಂದು ಹೇಳಿದ ಚಾಲಕ, ಲ್ಯಾಂಬೋರ್ಗಿನಿ ಓಡಿಸಬೇಕು ಎಂಬ ತನ್ನ ಕನಸನ್ನು ವ್ಯಕ್ತಪಡಿಸುತ್ತಾನೆ. ಇದನ್ನು ಕೇಳಿದ ಉದ್ಯಮಿ, ಕೇವಲ ಧನ್ಯವಾದ ಹೇಳಿ ಮುಂದೆ ಸಾಗದೆ, ರಸ್ತೆಯ ಬದಿಗೆ ವಾಹನ ನಿಲ್ಲಿಸುವಂತೆ ಹೇಳಿ ತಮ್ಮ ಲ್ಯಾಂಬೋರ್ಗಿನಿಯ ಕೀಗಳನ್ನು ಆಟೋ ಚಾಲಕನ ಕೈಗೆ ನೀಡುತ್ತಾರೆ. ನಂತರ ಇಬ್ಬರೂ ತಮ್ಮ ತಮ್ಮ ವಾಹನಗಳನ್ನು ಪರಸ್ಪರ ಬದಲಾಯಿಸಿಕೊಂಡು ಪ್ರಯಾಣ ಆರಂಭಿಸುತ್ತಾರೆ. ಆಟೋ ಚಾಲಕ ಅತ್ಯಂತ ಎಚ್ಚರಿಕೆಯಿಂದ ಸೂಪರ್‌ಕಾರನ್ನು ಚಲಾಯಿಸಿದರೆ, ಉದ್ಯಮಿ ನಗುತ್ತಲೇ ಆಟೋದಲ್ಲಿ ಪ್ರಯಾಣಿಸುತ್ತಾರೆ.
ಇದನ್ನೂ ಓದಿ: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು
ಭಾವುಕ ಸಂದೇಶ
ವಿಡಿಯೊದಲ್ಲಿ ಇಬ್ಬರೂ ತಮ್ಮ ತಮ್ಮ ವಿಭಿನ್ನ ವಾಹನಗಳಲ್ಲಿ ಪಕ್ಕಪಕ್ಕದಲ್ಲೇ ಸಾಗುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಉದ್ಯಮಿ, ಆಟೋದಲ್ಲಿ ಕುಳಿತ ಕ್ಷಣವೇ ತಮ್ಮ ಜೀವನದ ಆರಂಭದ ದಿನಗಳು ಕಣ್ಣಮುಂದೆ ಬಂದವು ಎಂದು ಬರೆದುಕೊಂಡಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದ ಸಂದರ್ಭಗಳಲ್ಲಿ, ಆಟೋ ದರವನ್ನು ಪಾವತಿಸುವುದೇ ಕಷ್ಟವಾಗುತ್ತಿತ್ತು. ಹಲವು ವರ್ಷಗಳ ನಂತರ ಮತ್ತೆ ಆಟೋದಲ್ಲಿ ಪ್ರಯಾಣಿಸಿದಾಗ ತಾವು ಎಷ್ಟು ದೂರ ಬಂದಿದ್ದೇವೆ ಎಂಬುದು ಅರಿವಾಯಿತು ಎಂದು ಅವರು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದು, ಒಬ್ಬ ನೆಟ್ಟಿಗ “ಬ್ರೋ, ನೀವು ನನ್ನ ಗೌರವ ಗಳಿಸಿದ್ದೀರಿ” ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು “ಆಟೋ ಚಾಲಕನ ಮುಖದಲ್ಲಿನ ನಗು ಎಲ್ಲವನ್ನೂ ಹೇಳುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.