ಬೆಂಗಳೂರು, ಜುಲೈ 26: ಸ್ವಂತ ಮನೆ ಖರೀದಿಸಲು ಗೃಹ ಸಾಲ ಪಡೆಯಲು ಯತ್ನಿಸಿದ್ದ 28 ವರ್ಷದ ಮಹಿಳೆ ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 48.5 ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಹಲಸೂರಿನ ನಿವಾಸಿಯಾಗಿರುವ ಮಹಿಳೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, 2025ರ ಅಕ್ಟೋಬರ್ನಲ್ಲಿ ವೆಬ್ಸೈಟ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಂಚಕರು ಕಳುಹಿಸಿದ್ದ ಲಿಂಕ್ನಲ್ಲಿ ಅವರು ಪ್ಯಾನ್ ಕಾರ್ಡ್, ಆಧಾರ್, ಕಚೇರಿ ವಿವರಗಳು ಹಾಗೂ ಸೆಲ್ಫಿ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದ್ದರು. ಆದರೆ ಕೆಲವು ಕಾರಣಗಳಿಂದ ಬಳಿಕ ಅವರು ಸಾಲದ ಪ್ರಕ್ರಿಯೆಯನ್ನು ಮುಂದುವರಿಸಿರಲಿಲ್ಲ.
ಬೆದರಿಸಿ ಹಣ ವಸೂಲಿ
ಹೀಗಿದ್ದರೂ 2026ರ ಮಾರ್ಚ್ 26ರಿಂದ ವಿವಿಧ ಅಂತರರಾಷ್ಟ್ರೀಯ ವಾಟ್ಸಾಪ್ ಸಂಖ್ಯೆಗಳ ಮೂಲಕ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರಲಾರಂಭಿಸಿವೆ. ನಿಮ್ಮ ಹೆಸರಿನಲ್ಲಿ ಹಲವು ಲೋನ್ ಆ್ಯಪ್ಗಳಿಂದ ಸಾಲ ಪಡೆದಿರುವುದಾಗಿ ಹೇಳಿರುವ ವಂಚಕರು, ಹಣ ಮರುಪಾವತಿಸುವಂತೆ ತಿಳಿಸಿದ್ದಾರೆ. ಬಳಿಕ ಮತ್ತಷ್ಟು ಬೆದರಿಸಿರುವ ವಂಚಕರು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಮಹಿಳೆಯ ಅಶ್ಲೀಲ ಮಾರ್ಫ್ ಮಾಡಿದ ಫೋಟೋಗಳನ್ನು ಕಳುಹಿಸಿ, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಮಾನಹಾನಿಯ ಭೀತಿಯಿಂದ ಮಹಿಳೆ ವಿವಿಧ ಹಂತಗಳಲ್ಲಿ ಸುಮಾರು 3.5 ಲಕ್ಷ ರೂಪಾಯಿಗಳನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ ಒಡ್ಡಿ ಬೆಂಗಳೂರಿನ ವ್ಯಕ್ತಿಗೆ 26 ಲಕ್ಷ ರೂ. ವಂಚನೆ; ನಾಲ್ವರ ವಿರುದ್ಧ ಎಫ್ಐಆರ್!
OTP ಇಲ್ಲದೆಯೇ ನಡೆದಿರುವ ವಹಿವಾಟು
ವಂಚನೆಯ ಅನುಮಾನ ಮೂಡುತ್ತಿದ್ದಂತೆ ಅವರು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ, ಅನುಮಾನಾಸ್ಪದ APK ಫೈಲ್ಗಳನ್ನು ಅಳಿಸಿ, ಫೋನ್ ಅನ್ನು ಫಾರ್ಮ್ಯಾಟ್ ಮಾಡಿದ್ದರು. ಅಲ್ಲದೆ ಮೇ ತಿಂಗಳಲ್ಲಿ ಹೊಸ ಮೊಬೈಲ್ ಮತ್ತು ಹೊಸ ಸಿಮ್ ಕಾರ್ಡ್ ಬಳಸಲು ಆರಂಭಿಸಿದ್ದರು. ಆದರೂ ವಂಚನೆ ಅಲ್ಲಿಗೇ ನಿಲ್ಲಲಿಲ್ಲ. 2026ರ ಜುಲೈನಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿದಾಗ, ತಮ್ಮ ಅನುಮತಿ ಇಲ್ಲದೆ ಸುಮಾರು 45 ಲಕ್ಷ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ವಹಿವಾಟುಗಳ ಕುರಿತು ಯಾವುದೇ OTP ಅಥವಾ SMS ಎಚ್ಚರಿಕೆ ತಮಗೆ ಬಂದಿರಲಿಲ್ಲ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯಿಂದ ಬೆಚ್ಚಿಬಿದ್ದ ಅವರು ತಕ್ಷಣ ಬ್ಯಾಂಕ್ಗೆ ದೂರು ನೀಡಿದ್ದು, ಬ್ಯಾಂಕ್ ಸಿಬ್ಬಂದಿ 1930 ಸೈಬರ್ ಸಹಾಯವಾಣಿ ಹಾಗೂ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಆದರೆ OTP ಇಲ್ಲದೆ ಹಣ ಹೇಗೆ ವರ್ಗಾವಣೆಯಾಯಿತು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ಹಣ ವರ್ಗಾವಣೆಯಾದ ಖಾತೆಗಳ ವಿವರಗಳನ್ನು ಮಾತ್ರ ಬ್ಯಾಂಕ್ ನೀಡಿದೆ ಎಂದು ಆಕೆ ತಿಳಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:38 am, Sun, 26 July 26