ನವದೆಹಲಿ, ಆಗಸ್ಟ್ 6: ಭಾರತದ ಮನೆಗಳಲ್ಲಿ ಬಳಕೆಯಾಗದೆ ಕೊಳೆಯುತ್ತಿರುವ ಚಿನ್ನ ಸಾವಿರಾರು ಟನ್ಗಳಷ್ಟಿರಬಹುದು ಎಂಬ ಅಂದಾಜು ಇದೆ. ಇವುಗಳನ್ನು ನಗದೀಕರಿಸಿದರೆ ಆರ್ಥಿಕತೆಗೆ ಸಖತ್ ಪುಷ್ಟಿ ಸಿಗುತ್ತದೆ ಎನ್ನುವುದು ಆರ್ಥಿಕಜ್ಞರ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರವೂ ವಿವಿಧ ಯೋಜನೆಗಳನ್ನು ಹಾಕಿದೆ. ಅದರಲ್ಲಿ ಗೋಲ್ಡ್ ಮಾನಿಟೈಸಿಂಗ್ ಸ್ಕೀಮ್ ಅಥವಾ ಜಿಎಂಎಸ್ (GMS – ಚಿನ್ನ ನಗದೀಕರಣ ಯೋಜನೆ) ಒಂದು. ಆದರೆ, ಇದು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹೀಗಾಗಿ, ಸರ್ಕಾರ ಈ ಯೋಜನೆಯಲ್ಲಿ ಸ್ವಲ್ಪ ಪರಿಷ್ಕರಣೆ ತರಲು ಯೋಜಿಸುತ್ತಿದ್ದು, ಕೆಲ ಬದಲಾವಣೆಗಳನ್ನು ಮಾಡಲು ಸಿದ್ಧವಿದೆ ಎಂದು ಹೇಳಲಾಗುತ್ತಿದೆ. ಈ ಪರಿಷ್ಕೃತ ಗೋಲ್ಡ್ ಮೊನೆಟೈಸೇಶನ್ ಸ್ಕೀಮ್ ಅಡಿಯಲ್ಲಿ ಭಾರತೀಯ ಆಭರಣ ವ್ಯಾಪಾರಿಗಳು (Jewellers) ಶೇಕಡಾ 1% ರಷ್ಟು ಪ್ರೋತ್ಸಾಹಧನ/ಕಮಿಷನ್ ಪಡೆಯುವ ಸಾಧ್ಯತೆಯಿದೆ. ಒಡವೆ ವ್ಯಾಪಾರಿಗಳ ಸಂಸ್ಥೆಯಾದ ಐಬಿಜೆಎ ಸರ್ಕಾರಕ್ಕೆ ಕೆಲ ಪ್ರಸ್ತಾಪಗಳನ್ನು ಸಲ್ಲಿಸಿದೆ.
ಆಭರಣ ವ್ಯಾಪಾರಿಗಳಿಗೆ ಪ್ರೋತ್ಸಾಹಧನ
ಗ್ರಾಹಕರಿಂದ ಹಳೆಯ ಚಿನ್ನವನ್ನು ಸಂಗ್ರಹಿಸಿ, ಅದನ್ನು ರಿಫೈನರ್ಗಳಿಗೆ (Refiners) ತಲುಪಿಸುವ ಜವಾಬ್ದಾರಿಯನ್ನು ಆಭರಣ ವ್ಯಾಪಾರಿಗಳಿಗೆ ನೀಡಲು IBJA ಶಿಫಾರಸು ಮಾಡಿದೆ. ಈ ಸೇವೆಯಾಗಿ ರಿಫೈನರ್ಗಳಿಂದ ಅಥವಾ ಯೋಜನೆಯಿಂದ ಆಭರಣ ವ್ಯಾಪಾರಿಗಳಿಗೆ ಒಟ್ಟು ಚಿನ್ನದ ಮೌಲ್ಯದ 0.75% ರಿಂದ 1% ರಷ್ಟು ನೇರ ಪ್ರೋತ್ಸಾಹಧನ ಸಿಗಲಿದೆ.
ಯೋಜನೆಯ ಉದ್ದೇಶ ಮತ್ತು ಬ್ಯಾಂಕ್ಗಳ ತೊಡಕು
ಭಾರತೀಯ ಮನೆಗಳಲ್ಲಿ ಬಳಸದೆ ಇಟ್ಟಿರುವ (Idle Gold) ಚಿನ್ನ ಸದ್ಯ ಅಂದಾಜು 30,000 ಟನ್ ಇರಬಹುದು . ಇದನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ತರುವುದು ಮತ್ತು ಚಿನ್ನದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯ ಹಾದಿಯಲ್ಲಿರುವುದು ಯಾಕೆ? ಇಲ್ಲಿವೆ ಪ್ರಮುಖ ಕಾರಣಗಳು
2015 ರಲ್ಲೇ ಈ ಯೋಜನೆ ಪ್ರಾರಂಭವಾದರೂ, ಬ್ಯಾಂಕ್ಗಳಲ್ಲಿ ಸಿಬ್ಬಂದಿ ಕೊರತೆ ಮತ್ತು ಕಷ್ಟಕರ ನಿಯಮಗಳಿಂದಾಗಿ ಇದು ಯಶಸ್ವಿಯಾಗಿರಲಿಲ್ಲ. ಇಲ್ಲಿಯವರೆಗೆ ಕೇವಲ 39 ಟನ್ ಚಿನ್ನ ಮಾತ್ರ ಸಂಗ್ರಹವಾಗಿದೆ.
ಹೊಸ ಮಾದರಿಯಲ್ಲಿ, ಬ್ಯಾಂಕ್ಗಳು ಹಳೆಯ ಚಿನ್ನ ಸಂಗ್ರಹಣೆಯ ಜವಾಬ್ದಾರಿಯಿಂದ (Front-end) ಮುಕ್ತವಾಗಿರುತ್ತವೆ ಮತ್ತು ಜ್ಯುವೆಲರ್ಗಳು ನೇರವಾಗಿ ಗ್ರಾಹಕರನ್ನು ಸಂಪರ್ಕಿಸಿ ಚಿನ್ನ ಸಂಗ್ರಹಿಸಲಿದ್ದಾರೆ.
ಗ್ರಾಹಕರು ಮತ್ತು ಆಭರಣ ವ್ಯಾಪಾರಿಗಳಿಗೆ ಆಗುವ ಪ್ರಯೋಜನ
- ಆಭರಣ ವ್ಯಾಪಾರಿಗಳಿಗೆ: ಕಮಿಷನ್ ಸಿಗುವುದರಿಂದ ವ್ಯಾಪಾರಿಗಳು ಈ ಗೋಲ್ಡ್ ಮಾನಿಟೈಸೇಶನ್ ಯೋಜನೆಯನ್ನು ಸಕ್ರಿಯವಾಗಿ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಮಳಿಗೆಗಳಿಗೆ ಗ್ರಾಹಕರ ಭೇಟಿ (Footfall) ಹೆಚ್ಚಾಗಲಿದೆ.
- ಗ್ರಾಹಕರಿಗೆ: ಹತ್ತಿರದ ವಿಶ್ವಾಸಾರ್ಹ ಜ್ಯುವೆಲರಿ ಶಾಪ್ಗಳ ಮೂಲಕವೇ ತಮ್ಮ ಬಳಿ ಇರುವ ಉಚಿತ ಚಿನ್ನವನ್ನು ಡೆಪಾಸಿಟ್ ಮಾಡಿ ಬಡ್ಡಿ ಗಳಿಸಲು ಸುಲಭವಾದ ಮಾರ್ಗ ಸಿಗಲಿದೆ.
ಇದನ್ನೂ ಓದಿ: ಹಳೆಯ ಪಿಎಫ್ ಖಾತೆಗಳನ್ನು ಪಡೆಯಲು ಈ ತಿಂಗಳಲ್ಲೇ ಬರಲಿದೆ E-PRAAPTI ಪೋರ್ಟಲ್
ಏನಿದು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್?
ಚಿನ್ನ ನಗದೀಕರಣ ಯೋಜನೆ ಅಥವಾ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ನಲ್ಲಿ ಜನರು ತಮ್ಮಲ್ಲಿರುವ ಚಿನ್ನವನ್ನು ಡೆಪಾಸಿಟ್ ಮಾಡಬಹುದು. ಚಿನ್ನದ ಗುಣಮಟ್ಟ ಮತ್ತು ತೂಕದ ಪ್ರಕಾರ ಅದರ ಮೌಲ್ಯಮಾಪನ ಮಾಡಲಾಗುತ್ತದೆ. ಈ ಚಿನ್ನವನ್ನು ಕರಗಿಸಿ ಪರಿಶುದ್ಧ ಚಿನ್ನವಾಗಿ ಪರಿವರ್ತಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಸ್ಕೀಮ್ ಮೆಚ್ಯೂರಿಟಿ ಆದ ಬಳಿಕ ಜನರು ಶುದ್ಧ ಚಿನ್ನವನ್ನು ಪಡೆಯಬಹುದು, ಅಥವಾ ಮಾರುಕಟ್ಟೆ ಬೆಲೆಯಲ್ಲಿ ಕ್ಯಾಷ್ ಪಡೆಯಬಹುದು. ಅದರ ಜೊತೆಗೆ, ಸ್ಕೀಮ್ ಅವಧಿಯಲ್ಲಿ ಬಡ್ಡಿ ಆದಾಯವೂ ಜನರಿಗೆ ಸಿಗುತ್ತಿರುತ್ತದೆ.
ಸರ್ಕಾರಕ್ಕೆ ಮತ್ತು ಆರ್ಥಿಕತೆಗೆ ಈ ಸ್ಕೀಮ್ನಿಂದ ಪ್ರಯೋಜನಗಳುಂಟು. ಜನರ ಬಳಿ ನಿರುಪಯುಕ್ತವಾದ ಚಿನ್ನವು ಮಾರುಕಟ್ಟೆಗೆ ಬಂದರೆ, ಚಿನ್ನದ ಆಮದನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಸರ್ಕಾರಕ್ಕೆ ಆಮದು ವೆಚ್ಚ ತಪ್ಪುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ