
ಟೆಹ್ರಾನ್ಮ, ಮಾ.9: ಇಸ್ರೇಲ್, ಅಮೆರಿಕ ದಾಳಿಯಲ್ಲಿ ತಮ್ಮ ಪರಮೋಚ್ಚ ನಾಯಕ ಕಳೆದುಕೊಂಡಿರುವ ಇರಾನ್, ಇದೀಗ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಆದರೆ ಈ ಆಯ್ಕೆಗೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ. ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಸೋಮವಾರ ಮಧ್ಯರಾತ್ರಿ ಮಹತ್ವದ ಘೋಷಣೆ ಮಾಡಿದ್ದು, ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ (Mojtaba Khamenei) ಅವರನ್ನು ದೇಶದ ನೂತನ ಪರಮೋಚ್ಚ ನಾಯಕನನ್ನಾಗಿ ನೇಮಿಸಿದೆ. ಕಳೆದ ವಾರ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಹತರಾದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
88 ಸದಸ್ಯರನ್ನೊಳಗೊಂಡ ಧರ್ಮಗುರುಗಳ ಮಂಡಳಿಯು ಮೊಜ್ತಬಾ ಅವರ ಪರವಾಗಿ ಬಹುಮತದ ತೀರ್ಪು ನೀಡಿದೆ. ಇವರು ಇರಾನ್‌ನ ಭದ್ರತಾ ಪಡೆಗಳು ಮತ್ತು ವ್ಯಾಪಾರ ವಲಯದಲ್ಲಿ ಅಪಾರ ಪ್ರಭಾವ ಹೊಂದಿದ್ದಾರೆ. ಮೊಜ್ತಬಾ ಅವರ ನೇಮಕಾತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಮ್ಮ ಅನುಮೋದನೆ ಇಲ್ಲದೆ ಅವರು ಹೆಚ್ಚು ಕಾಲ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ” ಎಂದು ಟ್ರಂಪ್ ಎಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಮರಿಯಾನಾ ಎಲ್. ನೈಶುಲರ್ ಚೆನ್ನೈನ ಯುಎಸ್ ಕಾನ್ಸಲ್ ಜನರಲ್ ಆಗಿ ಅಧಿಕಾರ ಸ್ವೀಕಾರ
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ದಾಳಿ ಮುಂದುವರಿದಿದ್ದು, ಈವರೆಗೆ ಸುಮಾರು 1,332 ಇರಾನ್ ನಾಗರಿಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನ ತೈಲ ಘಟಕಗಳ ಮೇಲೆ ಇಸ್ರೇಲ್ ಸರಣಿ ಬಾಂಬ್ ದಾಳಿ ನಡೆಸುತ್ತಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಅವರು, ತಾವು ಶರಣಾಗುವುದಿಲ್ಲ ಮತ್ತು ಆಕ್ರಮಣಕಾರರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಗುಡುಗಿದ್ದಾರೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ