ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಚಿತ್ರದ ನಿರ್ದೇಶಕ ಎಚ್. ವಿನೋದ್ ಅವರು ಸಿನಿಮಾದ ವಿಮರ್ಶೆಗಳ ಬಗ್ಗೆ ಆಸಕ್ತಿಕರ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ವಿಜಯ್ ಸಿನಿಮಾಗಳಿಗೆ ನೆಗೆಟಿವ್ ಪ್ರತಿಕ್ರಿಯೆ ಬರುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಇದು ಈಗ ಕಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಎಚ್. ವಿನೋದ್ ಮಾತನಾಡಿದ್ದಾರೆ. ತಮಿಳು ಚಿತ್ರರಂಗದ ಇತಿಹಾಸದಲ್ಲೇ ‘ಜನ ನಾಯಗನ್’ ಅತ್ಯಂತ ಪ್ರಮುಖ ಸಿನಿಮಾ ಎಂದು ಅವರು ಬಣ್ಣಿಸಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ತಮಗೊಂದು ಅದ್ಭುತ ಕನಸಿನಂತೆ ಭಾಸವಾಗುತ್ತಿದೆ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗುವವರೆಗೂ ಮಾತ್ರ ನಿರ್ದೇಶಕನ ನಿಯಂತ್ರಣದಲ್ಲಿ ಇರುತ್ತದೆ. ಚಿತ್ರಮಂದಿರಕ್ಕೆ ಬಂದ ಮೇಲೆ ಅದರ ಹಣೆಬರಹವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ವಿನೋದ್ ಹೇಳಿದ್ದಾರೆ. ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಚಿತ್ರತಂಡದ ಮೇಲೆ ಭಾರೀ ಒತ್ತಡ ಇತ್ತು. ಆದರೆ ಈ ಜವಾಬ್ದಾರಿಯ ದೊಡ್ಡ ಹೊರೆ ನಾಯಕ ನಟ ಮತ್ತು ನಿರ್ಮಾಪಕರ ಮೇಲಿತ್ತು ಎಂದು ಅವರು ತಿಳಿಸಿದ್ದಾರೆ.
ವಿಜಯ್ ಅವರ ಸಿನಿಮಾಗಳ ಆರಂಭಿಕ ವಿಮರ್ಶೆಗಳ ಬಗ್ಗೆ ವಿನೋದ್ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ಸರ್ ಸಿನಿಮಾ ರಿಲೀಸ್ ಆದ ಮೊದಲ ವಾರ ಎಲ್ಲರೂ ನೆಗೆಟಿವ್ ಆಗಿ ಮಾತನಾಡುತ್ತಾರೆ. ಚಿತ್ರದಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ವಿಮರ್ಶಕರು ಚರ್ಚೆ ಮಾಡುತ್ತಾರೆ. ಆದರೆ ಆರು ತಿಂಗಳ ನಂತರ ಅದೇ ಸಿನಿಮಾ ಸಮಾಜದಲ್ಲಿ ದೊಡ್ಡ ಹಿಟ್ ಆಗಿ ಹೊರಹೊಮ್ಮುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಜನ ನಾಯಗನ್’ ಬಾಕ್ಸ್ ಆಫೀಸ್ ಕಲೆಕ್ಷನ್; ಎರಡನೇ ದಿನ ದೊಡ್ಡ ಕುಸಿತ ಕಂಡ ವಿಜಯ್ ಸಿನಿಮಾ
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಬಿಗ್ ಬಜೆಟ್ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸದ್ಯ ಈ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.