ಬೆಂಗಳೂರು, ಏ.27: ರಾಜ್ಯದ ರಾಜಧಾನಿಯಲ್ಲೇ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳ ಪರದಾಟ ಮುಂದುವರಿದಿದೆ. ಅದರಲ್ಲೂ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ಷೇತ್ರಕ್ಕೆ ಒಳಪಡುವ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಜನ ಹೈರಾಣಾಗಿದ್ದಾರೆ. ಈ ಹಿಂದೆಯೇ ಇಂತಹ ಸಮಸ್ಯೆಗಳು ಬರಬಹುದು ಎಂಬ ಮಾಹಿತಿ ವರದಿಯಾಗಿತ್ತು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯಕ್ಕೆ ಆಸ್ಪತ್ರೆಯ ವೈದ್ಯಕೀಯ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಕೆ.ಸಿ. ಜನರಲ್ ಆಸ್ಪತ್ರೆಯ ಸುಮಾರು 20ಕ್ಕೂ ಹೆಚ್ಚು ಪ್ರಮುಖ ನೌಕರರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ಆಸ್ಪತ್ರೆಯ ಪ್ರಮುಖ ವಿಭಾಗಗಳೇ ಸ್ಥಗಿತಗೊಂಡಿವೆ.
ಸಿಬ್ಬಂದಿ ಕೊರತೆಯಿಂದಾಗಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳು ಆಸ್ಪತ್ರೆ ಸೌಲಭ್ಯಗಳಿಂದ ಹಾಗೂ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಪ್ರತಿದಿನ ಇಲ್ಲಿ 100 ರಿಂದ 120 ಎಕ್ಸರೆಗಳನ್ನು ಮಾಡಲಾಗುತ್ತಿತ್ತು. ಆದರೆ ಇಂದು ಕೇವಲ 20 ಎಕ್ಸರೆ ಮಾತ್ರ ಮಾಡಲಾಗಿದ್ದು, ಉಳಿದ ರೋಗಿಗಳು ಪರದಾಡುತ್ತಿದ್ದಾರೆ. ಲ್ಯಾಬ್ಗೆ ದಿನಕ್ಕೆ 600ಕ್ಕೂ ಹೆಚ್ಚು ಕೇಸ್ಗಳು ಬರುತ್ತವೆಯಾದರೂ ಸಿಬ್ಬಂದಿ ಇಲ್ಲದೆ ಪರೀಕ್ಷೆಗಳು ವಿಳಂಬವಾಗುತ್ತಿವೆ. ಇನ್ನು ಫಿಸಿಯೋಥೆರಫಿಗೆ 40 ಜನ ಬಂದರೆ ಕೇವಲ 10 ಜನರಿಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ.
ಇದನ್ನೂ ಓದಿ: ಡಿ ಸುಧಾಕರ್ ಆರೋಗ್ಯ ಸಹಜಸ್ಥಿತಿಯಲ್ಲಿದೆ: ಸಚಿವರ ಹೆಲ್ತ್ ಅಪ್ಡೇಟ್ ಕೊಟ್ಟ ಗೃಹಸಚಿವ ಡಾ ಜಿ ಪರಮೇಶ್ವರ್
ಲ್ಯಾಬ್ ಟೆಕ್ನಿಶಿಯನ್, ಎಕ್ಸರೆ ಟೆಕ್ನಾಲಜಿಸ್ಟ್, ಫಿಸಿಯೋಥೆರಫಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ನೇತ್ರಾಧಿಕಾರಿ ಮತ್ತು ಲಸಿಕಾ ಸಿಬ್ಬಂದಿ ಸೇರಿದಂತೆ ಆಡಳಿತ ವಿಭಾಗದ ನೌಕರರನ್ನು ಜನಗಣತಿಗೆ ಕಳುಹಿಸಲಾಗಿದೆ. ದೂರದ ಊರುಗಳಿಂದ ಮತ್ತು ನಗರದ ವಿವಿಧ ಭಾಗಗಳಿಂದ ನಂಬಿ ಬರುವ ರೋಗಿಗಳು, ಟೆಸ್ಟ್ ಮಾಡಿಸಲು ಸಾಧ್ಯವಾಗದೆ ಖಾಸಗಿ ಲ್ಯಾಬ್ಗಳತ್ತ ಮುಖ ಮಾಡುವಂತಾಗಿದೆ. “ಆರೋಗ್ಯ ಸೇವೆ ನೀಡುವುದು ಮೊದಲ ಆದ್ಯತೆಯಾಗಬೇಕಿತ್ತು, ಅದನ್ನು ಬಿಟ್ಟು ಸಿಬ್ಬಂದಿಯನ್ನು ಬೇರೆ ಕೆಲಸಕ್ಕೆ ಬಳಸಿಕೊಂಡರೆ ಬಡ ರೋಗಿಗಳ ಗತಿಯೇನು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ