ಮೆಲ್ಬೋರ್ನ್, ಜುಲೈ 09: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಉದ್ಯಮ ರಂಗದಲ್ಲಿ ಭಾರತದ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ. ಗುರುವಾರ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಜಂಟಿಯಾಗಿ ಆಸ್ಟ್ರೇಲಿಯಾ-ಭಾರತ ಸಿಇಒಗಳ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿಆಸ್ಟ್ರೇಲಿಯಾದ ಕಂಪನಿಗಳಿಗೆ ಭಾರತವು ಅತ್ಯಂತ ಸುರಕ್ಷಿತ ಹಾಗೂ ಗರಿಷ್ಠ ಲಾಭ ತಂದುಕೊಡುವ ‘ದೀರ್ಘಾವಧಿಯ ಹೂಡಿಕೆ ತಾಣ’ ಎಂದು ಬಣ್ಣಿಸಿದ್ದಾರೆ.
ಭಾರತದ ಬೃಹತ್ ಮಾರುಕಟ್ಟೆ ಮತ್ತು ಆಸ್ಟ್ರೇಲಿಯಾದ ಅತ್ಯಾಧುನಿಕ ತಂತ್ರಜ್ಞಾನದ ಪರಿಣತಿ ಒಂದಾದರೆ ಉಭಯ ದೇಶಗಳಿಗೂ ಗೆಲುವು ಸಿಗುವ ‘ವಿನ್-ವಿನ್’ಒಪ್ಪಂದ ಸಾಧ್ಯವಾಗುತ್ತದೆ ಎಂದು ಮೋದಿ ಪ್ರತಿಪಾದಿಸಿದರು. ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಪ್ರಸ್ತಾವಿತ ‘ಸಮಗ್ರ ಆರ್ಥಿಕ ಸಹಕಾರ ಒಪ್ಪಂದ’ವನ್ನು ಆದಷ್ಟು ಬೇಗ ಅಂತಿಮಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಶಿಕ್ಷಣ ವಲಯದಲ್ಲಿ ಆಗುತ್ತಿರುವ ಪ್ರಗತಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಭಾರತದ ಮಣ್ಣಿನಲ್ಲಿ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ತಮ್ಮ ಅಂತಾರಾಷ್ಟ್ರೀಯ ಕ್ಯಾಂಪಸ್ಗಳನ್ನು ತೆರೆಯುತ್ತಿರುವುದನ್ನು ಮುಕ್ತವಾಗಿ ಸ್ವಾಗತಿಸಿದರು. ಉನ್ನತ ಶಿಕ್ಷಣ, ಜಂಟಿ ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿನ ಈ ಆಳವಾದ ಒಕ್ಕೂಟವು ಭವಿಷ್ಯದ ಜಾಗತಿಕ ಅವಕಾಶಗಳಿಗಾಗಿ ಉಭಯ ದೇಶಗಳ ಯುವ ಪ್ರತಿಭೆಗಳನ್ನು ಸಜ್ಜುಗೊಳಿಸಲಿದೆ ಎಂದರು.
Video Source(ANI X Account)
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ