
ಒಂದು ಸಿನಿಮಾ ರಿಲೀಸ್ ಆಗಿ ಹಿಟ್ ಆದ ಬಳಿಕ ಕೆಲವರು ನಿರ್ದೇಶಕರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ ಉದಾಹರಣೆ ಇದೆ. ಕೆಲವು ನಿಜವಾದರೆ, ಕೆಲವು ಸುಳ್ಳಾಗಿದೆ. ಈಗ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಸಿನಿಮಾ ಮೇಲೆ ‘ಮಾರಿಗೋಲ್ಡ್’ ಸಿನಿಮಾ ನಿರ್ದೇಶಕ ರಾಘವೇಂದ್ರ ನಾಯಕ್ ದೀರ್ಘ ಪೋಸ್ಟ್ ಬರೆದಿದ್ದಾರೆ. ಅವರು ಆರೋಪ ಮಾಡಿರೋದು ‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಇರಬಹುದು ಎಂಬ ಚರ್ಚೆ ಕೂಡ ನಡೆದಿದೆ.
‘ಸಿನಿಮಾ ಬರಹಗಾರರೇ ಮತ್ತು ಭವಿಷ್ಯದ ನಿರ್ದೇಶಕರೇ, ನನ್ನದೊಂದು ಸಣ್ಣ ಕಿವಿಮಾತು: ನೀವು ಯಾವುದೇ ಕಥೆ ಸಿದ್ಧಪಡಿಸಿದಾಗ, ಮೊದಲು ಅದನ್ನು SWA (Screenwriters Association) ನಲ್ಲಿ ನೋಂದಾಯಿಸಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಹಂತದ ಕಡತವನ್ನೂ (File) ನಿಮ್ಮ ಸ್ವಂತ ಇಮೇಲ್ ವಿಳಾಸಕ್ಕೆ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಯಾರಿಗಾದರೂ ಕಥೆ ವಿವರಿಸುವ (Narration) ಮೊದಲು ಅದರ ಆಡಿಯೋ ರೆಕಾರ್ಡ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಕಥೆ ಹೇಳುವ ಮುನ್ನ ನಡೆಸುವ ಸಂಭಾಷಣೆ ಹಾಗೂ ಕಥೆ ಮುಗಿದ ನಂತರದ ಚರ್ಚೆಗಳೂ ಅದರಲ್ಲಿ ದಾಖಲಾಗಿರಲಿ. ಮೀಟಿಂಗ್ ಮುಗಿದ ಕೂಡಲೇ ಆ ಆಡಿಯೋ ಫೈಲ್ ಅನ್ನು ನಿಮಗೆ ನೀವೇ ಇಮೇಲ್ ಮಾಡಿಕೊಳ್ಳಿ. ಆಗ ನೀವು ನಾಯಕನಿಗಾಗಲಿ, ನಿರ್ಮಾಪಕರಿಗಾಗಲಿ ಅಥವಾ ನಿರ್ದೇಶಕರಿಗಾಗಲಿ ಕಥೆ ವಿವರಿಸಿದ್ದೀರಿ ಎಂಬುದಕ್ಕೆ ಭದ್ರವಾದ ದಾಖಲೆ ಇರುತ್ತದೆ’ ಎಂದು ರಾಘವೇಂದ್ರ ನಾಯಕ್ ಬರಹ ಆರಂಭಿಸಿದ್ದಾರೆ.
‘ಇಂತಹ ಮುನ್ನೆಚ್ಚರಿಕೆ ವಹಿಸದ ಕಾರಣ ಇಂದು ನನಗೆ ದೊಡ್ಡ ದ್ರೋಹವಾಗಿದೆ. ನನ್ನ ಕಥೆಯ ಇಡೀ ದ್ವಿತೀಯಾರ್ಧವನ್ನು (Second Half) ಬಳಸಿಕೊಂಡು ಸಿನಿಮಾ ಮಾಡಿ ಬಿಡುಗಡೆಗೊಳಿಸಿದ್ದಾರೆ; ಆ ಸಿನಿಮಾ ಈಗ ಯಶಸ್ವಿಯಾಗಿ ಪ್ರದರ್ಶನವನ್ನೂ ಕಾಣುತ್ತಿದೆ. ಈ ಕಥೆ ನನ್ನದು ಎಂಬುದು ನನ್ನ ಆಪ್ತ ವಲಯದ ಬಹಳಷ್ಟು ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಸ್ನೇಹಿತರಿಗೆ ತಿಳಿದಿದೆ. ಕನ್ನಡದ ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿ, ನನಗೆ ಮುಂಗಡ ಸಂಭಾವನೆಯನ್ನೂ ನೀಡಿದ್ದರು. ಇದೇ ನಿರ್ಮಾಪಕ-ನಿರ್ದೇಶಕರ ಜೊತೆಗೂಡಿ ಎರಡು ವರ್ಷಗಳ ಹಿಂದೆಯೇ ನಾನು ಆ ‘ನಿರ್ದೇಶಕ, ನಿರ್ಮಾಪಕ ಕಮ್ ನಟ’ನಿಗೆ ಕಥೆ ಹೇಳಿದ್ದೆ’ ಎಂದು ಆರೋಪಿಸಿದ್ದಾರೆ ಅವರು.
‘ನನ್ನ ಬಳಿ ಆ ಕಥೆ ನನ್ನದೇ ಎನ್ನುವುದಕ್ಕೆ ಸೂಕ್ತ ದಾಖಲೆಗಳಿವೆಯಾದರೂ, “ನಾನು ಅವರಿಗೆ ಈ ಕಥೆಯನ್ನೇ ಹೇಳಿದ್ದೆ” ಎನ್ನುವುದಕ್ಕೆ ಪೂರಕ ದಾಖಲೆಗಳಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ನಾನು ಅಸಹಾಯಕನಾಗಿ ಸುಮ್ಮನಿರಬೇಕಾಗಿದೆ. ಭವಿಷ್ಯದಲ್ಲಿ ಬೇರೆ ಯಾವ ಬರಹಗಾರರಿಗೂ ಇಂತಹ ಮೋಸ ಆಗಬಾರದು ಎಂಬ ಸದಾಶಯದಿಂದ ಮತ್ತು ಅವರು ಮುನ್ನೆಚ್ಚರಿಕೆ ವಹಿಸಲಿ ಎಂಬ ಕಾರಣಕ್ಕೆ ಈ ಪೋಸ್ಟ್ ಹಾಕುತ್ತಿದ್ದೇನೆ. ದಯವಿಟ್ಟು ಬರಹಗಾರರೇ, ನಿಮ್ಮ ಕಲ್ಪನೆಗೆ ಕನ್ನ ಬೀಳದಂತೆ ಜಾಗ್ರತೆ ವಹಿಸಿ. ನಿಮಗೆ ಶುಭವಾಗಲಿ’ ಎಂದು ಅವರು ಬರಹ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?
ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಕನ್ನಡದ ಸಿನಿಮಾ ಎಂದರೆ ಅದು ‘ಲವ್ ಮಾಕ್ಟೇಲ್ 3’. ಅಲ್ಲದೆ, ನಿರ್ದೇಶಕ, ನಿರ್ಮಾಪಕ ಕಮ್ ನಟ ಎಂದರೆ ಅದು ಡಾರ್ಲಿಂಗ್ ಕೃಷ್ಣ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಇದಕ್ಕೆ ಕೃಷ್ಣ ಅವರ ಕಡೆಯಿಂದ ಯಾವ ರೀತಿಯ ಸ್ಪಷ್ಟನೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.