ಇಂಧನ ಉಳಿಸಲು ಮೋದಿ ಕರೆ; ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ ಕೇಂದ್ರ ಸಚಿವರು – Kannada News

ನವದೆಹಲಿ, ಜೂನ್ 3: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೇಂದ್ರ ಸಚಿವರು ಪರಿಸರ ಕಾಳಜಿ ಮೆರೆದಿರುವ ಅಪರೂಪದ ವಿದ್ಯಮಾನವೊಂದು ನಡೆದಿದೆ. ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿರುವ ಹಿನ್ನೆಲೆಯಲ್ಲಿ ಒಂದೇ ಕಾರಿನಲ್ಲಿ ಕ್ಯಾಬಿನೆಟ್ ಸಭೆಗೆ ತೆರಳಿ ಕೇಂದ್ರ ಸಚಿವರು ಮಾದರಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಕೇಂದ್ರ ಸಚಿವರು ಅದ್ಭುತವಾಗಿ ಸ್ಪಂದಿಸಿದ್ದಾರೆ.

ಇಂದು ನಡೆದ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆಗೆ ಕೇಂದ್ರ ಸಚಿವರಾದ ಜಿ. ಕಿಶನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ್ ಜೋಶಿ ಮತ್ತಿತರ ಕೇಂದ್ರ ಸಚಿವರು ತಮ್ಮ ವೈಯಕ್ತಿಕ ಅಧಿಕೃತ ಕಾರುಗಳನ್ನು ಬಿಟ್ಟು, ಒಂದೇ ಕಾರಿನಲ್ಲಿ ‘ಕಾರ್‌ಪೂಲಿಂಗ್’ (Carpooling) ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಹಾಗೂ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಫೋಟೋ ಹಾಗೂ ವಿವರಗಳನ್ನು ಹಂಚಿಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಸಂರಕ್ಷಣೆ ಮತ್ತು ಮಾಲಿನ್ಯ ಮುಕ್ತ ಭಾರತದ ಕರೆಯನ್ನು ಬೆಂಬಲಿಸಿ, ನಾವು ಇಂದು ಕ್ಯಾಬಿನೆಟ್ ಸಭೆಗೆ ಒಟ್ಟಿಗೆ ಕಾರ್‌ಪೂಲ್ ಮಾಡಿದ್ದೇವೆ” ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ. ಕಿಶನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ಸಿ ಆರ್ ಪಾಟೀಲ್ ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ್ದಾರೆ.

ಹಾಗೇ, ಕೇಂದ್ರ ಸಚಿವರಾದ ಕಿರಣ್ ರಿಜಿಜು, ರಾಜೀವ್ ರಂಜನ್ ಸಿಂಗ್, ಮನೋಹರ್ ಖಟ್ಟರ್ ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ್ದಾರೆ.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ್ದಾರೆ.

ಇತ್ತೀಚಿನ ಜಾಗತಿಕ ಹವಾಮಾನ ಬದಲಾವಣೆ ಮತ್ತು ಇಂಧನ ದರಗಳ ಏರಿಳಿತದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಾಧ್ಯವಾದಷ್ಟು ಇಂಧನ ಉಳಿತಾಯದ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಸಾರ್ವಜನಿಕ ಸಾರಿಗೆ ಬಳಕೆ, ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ಕಾರ್‌ಪೂಲಿಂಗ್ ಮಾಡುವುದರಿಂದ ದೇಶದ ಇಂಧನ ಆಮದು ವೆಚ್ಚ ಕಡಿಮೆಯಾಗುವುದಲ್ಲದೆ, ಮಾಲಿನ್ಯವೂ ತಗ್ಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *