ಇನ್ನೋರ್ವ ಜಡ್ಜ್ ಮನೆಯಿಂದ ಆಭರಣ ಕದ್ದ ನ್ಯಾಯಾಧೀಶರಿಗೆ ಜಾಮೀನು ನಿರಾಕರಿಸಿದ ಕೋರ್ಟ್

ಇನ್ನೋರ್ವ ಜಡ್ಜ್ ಮನೆಯಿಂದ ಆಭರಣ ಕದ್ದ ನ್ಯಾಯಾಧೀಶರಿಗೆ ಜಾಮೀನು ನಿರಾಕರಿಸಿದ ಕೋರ್ಟ್

ಪಟಿಯಾಲ, ಏಪ್ರಿಲ್ 4: ಮೃತ ನ್ಯಾಯಾಧೀಶರ ನಿವಾಸದಲ್ಲಿನ ಕಳ್ಳತನದ ಆರೋಪಗಳನ್ನು ಎದುರಿಸುತ್ತಿರುವ ಸಿವಿಲ್ ನ್ಯಾಯಾಧೀಶ (ಜೂನಿಯರ್ ವಿಭಾಗ) ಬಿಕ್ರಮ್‌ದೀಪ್ ಸಿಂಗ್ ಅವರಿಗೆ ಪಂಜಾಬ್​ನ (Punjab) ಪಟಿಯಾಲ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಮೃತ ನ್ಯಾಯಾಧೀಶರ ಮಗ ನೀಡಿದ ಆಧಾರದಲ್ಲಿ ಸಿವಿಲ್ ನ್ಯಾಯಾಧೀಶರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಕಳೆದ ತಿಂಗಳು ದಾಖಲಾಗಿರುವ ಪೊಲೀಸ್ ಪ್ರಕರಣದ ಪ್ರಕಾರ, ಬಿಕ್ರಮ್‌ದೀಪ್ ಸಿಂಗ್ ಕಳೆದ ವರ್ಷ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕನ್ವಲ್ಜಿತ್ ಸಿಂಗ್ ಅವರು ಆಸ್ಪತ್ರೆಯಲ್ಲಿ ನಿಧನರಾದ ರಾತ್ರಿ ಅವರ ನಿವಾಸದಿಂದ ಚಿನ್ನದ ಆಭರಣಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರಿಂದರ್ ಸಿಧು ಏಪ್ರಿಲ್ 1ರಂದು ಬಿಕ್ರಮ್‌ದೀಪ್ ಸಿಂಗ್ ಅವರಿಗೆ ಜಾಮೀನು ನಿರಾಕರಿಸಿದ್ದಾರೆ. ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಅನುಮಾನಾಸ್ಪದ ಸಂದರ್ಭಗಳಲ್ಲಿ ಮೃತ ಸಹೋದ್ಯೋಗಿಯ ನಿವಾಸದಿಂದ ಭಾರೀ ಪ್ರಮಾಣದ ಚಿನ್ನ ಮತ್ತು ಆಭರಣಗಳನ್ನು ಕದ್ದಿರುವ ಆರೋಪ ಕೇಳಿಬಂದಿದೆ. ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದರಲ್ಲೂ ನ್ಯಾಯಾಂಗದ ಮುಖ್ಯಸ್ಥರಿಂದ ಇಂತಹ ಕೃತ್ಯವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?

ಘಟನೆ ನಡೆದು 7 ತಿಂಗಳ ವಿಳಂಬದ ನಂತರ ದುರುದ್ದೇಶಪೂರಿತ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆಯಾದರೂ ದೂರುದಾರರು ಪಟಿಯಾಲದ ಉಪ ಪೊಲೀಸ್ ಮಹಾನಿರ್ದೇಶಕರಿಗೆ ಅರ್ಜಿಯನ್ನು ವರ್ಗಾಯಿಸಿದ್ದಾರೆ ಎಂಬ ಕಾರಣಕ್ಕೆ ಈ ಪ್ರಕರಣ ಮತ್ತಷ್ಟು ಜಟಿಲವಾಗಿದೆ. ಈ ವಿಷಯದ ಬಗ್ಗೆ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ. ತನಿಖಾ ದಾಖಲೆಯೊಂದಿಗೆ ಲಭ್ಯವಿರುವ ಪೆನ್‌ಡ್ರೈವ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು ಜಾಮೀನು ಅರ್ಜಿದಾರರಾದ ಸಿವಿಲ್ ನ್ಯಾಯಾಧೀಶರು ಕೆಲವು ಪೆಟ್ಟಿಗೆಗಳು ಮತ್ತು ಚೀಲಗಳನ್ನು ಹೊತ್ತುಕೊಂಡು ಮೃತ ನ್ಯಾಯಾಧೀಶರ ಮನೆಯ ಆವರಣದೊಳಗೆ ಪ್ರವೇಶಿಸುವ ಮತ್ತು ಹೊರಗೆ ಹೋಗುವುದನ್ನು ತೋರಿಸುತ್ತವೆ. ಹೀಗಾಗಿ, ಈ ಪ್ರಕರಣದಲ್ಲಿ ಜಾಮೀನು ನೀಡಲು ಅಸಾಧ್ಯ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಮಾರ್ಚ್ 21ರಂದು ಮೃತ ನ್ಯಾಯಾಧೀಶ ಕನ್ವಲ್ಜಿತ್ ಸಿಂಗ್ ಅವರ ಪುತ್ರ ಅಂಗದ್‌ಪಾಲ್ ಸಿಂಗ್ ಈ ಬಗ್ಗೆ ದೂರು ನೀಡಿದ್ದರು. ಆಗಸ್ಟ್ 1, 2025ರಂದು ಆಸ್ಪತ್ರೆಯಲ್ಲಿ ತನ್ನ ಸ್ನೇಹಿತ ಕನ್ವಲ್ಜಿತ್ ಸಿಂಗ್ ನಿಧನರಾದ ನಂತರ ಅವರ ಮನೆ ಸಹಾಯಕಿ ಅಮರ್‌ಜಿತ್ ಕೌರ್ ಅಲಿಯಾಸ್ ಪಿಂಕಿ, ಸರ್ಕಾರಿ ಅಧಿಕಾರಿ ಗೌರವ್ ಗೋಯಲ್ ಮತ್ತು ಒಬ್ಬ ಅಪರಿಚಿತ ವ್ಯಕ್ತಿ ಜೊತೆ ನ್ಯಾಯಾಧೀಶ ಬಿಕ್ರಮ್​ದೀಪ್ ಸಿಂಗ್ ಮೃತ ನ್ಯಾಯಾಧೀಶರ ನಿವಾಸಕ್ಕೆ ಬಂದರು. ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ನೋಡಿ ಅಲ್ಲಿದ್ದ ನಮ್ಮ ಕುಟುಂಬದ ಪೂರ್ವಜರ ಒಡವೆಗಳನ್ನು ಕಳವು ಮಾಡಲಾಗಿದೆ. ಆ ವೇಳೆ ನಾವೆಲ್ಲರೂ ಆಸ್ಪತ್ರೆಯಲ್ಲಿ ಇದ್ದುದರಿಂದ ಈ ವಿಷಯ ಗಮನಕ್ಕೆ ಬಂದಿಲ್ಲ. ಬಿಕ್ರಮ್ ದೀಪ್ ಹಾಗೂ ಮೃತ ನ್ಯಾಯಾಧೀಶ ಸ್ನೇಹಿತರಾಗಿದ್ದು, ಅವರ ಆಗಾಗ ನಮ್ಮ ಮನೆಗೆ ಬರುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ಪುರಾವೆಯಾಗಿ ಸಿಸಿಟಿವಿ ವಿಡಿಯೋ ಕೂಡ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *