ಬೆಂಗಳೂರು, ಜುಲೈ 23: ಭಾರತದ ಪ್ರಮುಖ ಐಟಿ ದೈತ್ಯ ಸಂಸ್ಥೆ ಇನ್ಫೋಸಿಸ್ (Infosys) ತನ್ನ ಮುಖಂಡತ್ವದಲ್ಲಿ ಪ್ರಮುಖ ಬದಲಾವಣೆಯನ್ನು ಘೋಷಿಸಿದೆ. ಪ್ರಸ್ತುತ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿರುವ ಸಲಿಲ್ ಪಾರೇಕ್ ಅವರು 2027ರ ಮಾರ್ಚ್ 31 ರಂದು ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದು, ಸಂಸ್ಥೆಯ ಹಿರಿಯ ನಾಯಕ ಆಶಿಶ್ ಕುಮಾರ್ ದಾಶ್ (Ashiss Kumar Dash) ಅವರನ್ನು ನೂತನ ಸಿಇಒ (CEO Designate) ಆಗಿ ಆಡಳಿತ ಮಂಡಳಿ ನೇಮಕ ಮಾಡಿದೆ. ಆಶಿಶ್ ಕುಮಾರ್ ದಾಶ್ ಅವರು 2027ರ ಏಪ್ರಿಲ್ 1 ರಿಂದ 5 ವರ್ಷಗಳ ಅವಧಿಗೆ ಇನ್ಫೋಸಿಸ್ನ ನೂತನ ಸಿಇಒ ಮತ್ತು ಎಂಡಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸುದೀರ್ಘ ಸೇವೆ ಸಲ್ಲಿಸಿದ ಸಲಿಲ್ ಪಾರೇಕ್
2018 ರಲ್ಲಿ ಇನ್ಫೋಸಿಸ್ಗೆ ನೇರವಾಗಿ ಸಿಇಒ ಆಗಿ ಸೇರಿದ ಸಲಿಲ್ ಪಾರೇಕ್ ಅವರು 9 ವರ್ಷ ಆ ಹುದ್ದೆಯಲ್ಲಿದ್ದಂತಾಗುತ್ತದೆ. ಸಂಸ್ಥಾಪಕರು ಬಿಟ್ಟರೆ ಸಿಇಒ ಸ್ಥಾನದಲ್ಲಿ ಅತಿಹೆಚ್ಚು ಅವಧಿ ಇದ್ದ ಗೌರವ ಸಲೀಲ್ ಪಾರೇಕ್ ಅವರದ್ದಾಗಿದೆ.
ಸಲೀಲ್ ಪಾರೇಕ್ ಅವರು ತಮ್ಮ ಆಡಳಿತಾವಧಿಯಲ್ಲಿ ಇನ್ಫೋಸಿಸ್ನ ವಾರ್ಷಿಕ ಆದಾಯವನ್ನು $10 ಬಿಲಿಯನ್ನಿಂದ $20 ಬಿಲಿಯನ್ಗಿಂತಲೂ (ಸುಮಾರು ₹1.90 ಲಕ್ಷ ಕೋಟಿ) ಹೆಚ್ಚಿಸಿದ ಸಾಧನೆಯೊಂದಿಗೆ ನಿರ್ಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ
“ಇನ್ಫೋಸಿಸ್ನಂತಹ ಪ್ರತಿಷ್ಠಿತ ಸಂಸ್ಥೆಯನ್ನು ಮುನ್ನಡೆಸಿದ್ದು ನನಗೆ ಸಿಕ್ಕ ಗೌರವ. ಮುಂಬರುವ ತಿಂಗಳುಗಳಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಆಶಿಶ್ ದಾಶ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇನೆ” ಎಂದು ಪಾರೇಕ್ ಹೇಳಿದ್ದಾರೆ.
ಇನ್ಫೋಸಿಸ್ನ ಹಳೆಯ ಹುಲಿ ಆಶಿಶ್
ಐಐಟಿ ಖರಗ್ಪುರ ಹಳೆಯ ವಿದ್ಯಾರ್ಥಿಯಾಗಿರುವ ಆಶಿಶ್ ಕುಮಾರ್ ದಾಶ್ ಅವರು ಇನ್ಫೋಸಿಸ್ನಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಗ್ಲೋಬಲ್ ಹೆಡ್ (ಎನರ್ಜಿ, ಯುಟಿಲಿಟೀಸ್ ಅಂಡ್ ಸಸ್ಟೇನಬಿಲಿಟಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಂದನ್ ನಿಲೇಕಣಿ ಪ್ರತಿಕ್ರಿಯೆ
ಇನ್ಫೋಸಿಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ಅವರು ಮಾತನಾಡಿ, “ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಯುಗದಲ್ಲಿ ಇನ್ಫೋಸಿಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಕಂಪನಿಯ ಮೌಲ್ಯಗಳನ್ನು ಎತ್ತಿಹಿಡಿಯಲು ಆಂತರಿಕ ನಾಯಕರಾದ ಆಶಿಶ್ ದಾಶ್ ಸೂಕ್ತ ಅಭ್ಯರ್ಥಿ. ಸಲಿಲ್ ಪಾರೇಕ್ ಅವರ ಆಡಳಿತಾವಧಿಯಲ್ಲಿ ಇನ್ಫೋಸಿಸ್ ಡಿಜಿಟಲ್ ಮತ್ತು AI ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬಲವಾದ ಅಡಿಪಾಯ ನಿರ್ಮಿಸಿದೆ” ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ
ಐಟಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ವೇಗವಾಗಿ ನಡೆಯುತ್ತಿದ್ದು, ಆಶಿಶ್ ದಾಶ್ ಅವರ ನೇತೃತ್ವದಲ್ಲಿ ಇನ್ಫೋಸಿಸ್ ತನ್ನ ‘AI-ಫಸ್ಟ್ Strategy’ ಮತ್ತು ಜಾಗತಿಕ ಉದ್ಯಮ ವಿಸ್ತರಣೆಯನ್ನು ಮತ್ತಷ್ಟು ವೇಗಗೊಳಿಸಲಿದೆ. ಸಲಿಲ್ ಪಾರೇಕ್ ಅವರು 2027ರ ಮಾರ್ಚ್ವರೆಗೆ ತಮ್ಮ ಹುದ್ದೆಯಲ್ಲಿದ್ದು, ಸುಲಭ ಅಧಿಕಾರ ಹಸ್ತಾಂತರಕ್ಕೆ ನೆರವಾಗಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ