ಇರಾನ್ ಮತ್ತು ಇಸ್ರೇಲ್ ನಡುವೆ ಮತ್ತೊಮ್ಮೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ಇಸ್ರೇಲ್ ನೆರವಿಗೆ ನಿಂತಿದ್ದು ಕಳೆದ ಕೆಲ ದಿನಗಳಿಂದಲೂ ಬಾಂಬ್ ದಾಳಿಗಳು ನಡೆಯುತ್ತಲೇ ಇವೆ. ಅಂದಹಾಗೆ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂದು-ನಿನ್ನೆಯದ್ದಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ. ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಬಗ್ಗೆ ಡಾಕ್ಯುಮೆಂಟರಿಗಳು ಕೆಲ ಸಿನಿಮಾಗಳು ಸಹ ನಿರ್ಮಾಣ ಆಗಿವೆ. ಇವುಗಳ ಮೂಲಕ ಪ್ರಸ್ತುತ ಪರಿಸ್ಥಿತಿಯನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಗೆಗೆ ನಿರ್ಮಾಣಗೊಂಡಿರುವ ಡಾಕ್ಯುಮೆಂಟರಿ ಮತ್ತು ಸಿನಿಮಾಗಳ ಪಟ್ಟಿ ಇಲ್ಲಿದೆ…
ಸಿನಿಮಾ ಮತ್ತು ವೆಬ್ ಸರಣಿ
ಹಿಂದಿ ಸಿನಿಮಾ ‘ಟೆಹ್ರಾನ್’ 2012 ರಲ್ಲಿ ನಡೆದ ಇಸ್ರೇಲಿ ಅಧಿಕಾರಿಗಳ ಮೇಲಿನ ದಾಳಿಯ ಕತೆಯನ್ನು ಹೊಂದಿದೆ. ಆದರೆ ಇದು ಸಂಪೂರ್ಣ ಸತ್ಯ ಘಟನೆ ಆಧರಿತ ಸಿನಿಮಾ ಅಲ್ಲ. ಸಿನಿಮಾನಲ್ಲಿ ಜಾನ್ ಅಬ್ರಹಾಂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಜೀ5 ಮತ್ತು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.
ಫೌಡಾ (Fauda) ವೆಬ್ ಸರಣಿ ಮುಖ್ಯವಾಗಿ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಬಗ್ಗೆ ಇದ್ದರೂ, ನಂತರದ ಸೀಸನ್‌ಗಳಲ್ಲಿ ಇರಾನ್ ಹೇಗೆ ಈ ಸಂಘರ್ಷಕ್ಕೆ ಹಣಕಾಸು ಮತ್ತು ಬೆಂಬಲ ನೀಡುತ್ತದೆ ಎಂಬುದನ್ನು ತೋರಿಸಲಾಗಿದೆ. ಇದನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.
ಆಪಲ್ ಟಿವಿಯಲ್ಲಿ ಸ್ಟ್ರೀಮ್ ಆಗುವ ‘ಟೆಹ್ರಾನ್’ ವೆಬ್ ಸರಣಿ ಇಸ್ರೇಲ್ ಮತ್ತು ಇರಾನ್ ಸಂಘರ್ಷದ ಬಗ್ಗೆ ಅತ್ಯಂತ ನೇರವಾದ ಚಿತ್ರಣ ನೀಡುವ ಸರಣಿ ಎನ್ನಲಾಗುತ್ತದೆ. ಇರಾನ್‌ನ ಪರಮಾಣು ರಿಯಾಕ್ಟರ್ ಅನ್ನು ನಿಷ್ಕ್ರಿಯಗೊಳಿಸಲು ಟೆಹ್ರಾನ್‌ಗೆ ಹೋಗುವ ಮೊಸಾದ್ (Mossad) ಹ್ಯಾಕರ್-ಏಜೆಂಟ್‌ನ ಕಥೆ ಇದು. 2025/2026 ರಲ್ಲಿ ಇದರ ಮೂರನೇ ಸೀಸನ್ ಬಿಡುಗಡೆ ಆಗಿದೆ.
ದಿ ಏಂಜೆಲ್ (The Angel) ಇದು ಇಸ್ರೇಲ್ ಅನ್ನು ಆಕಸ್ಮಿಕ ದಾಳಿಯಿಂದ ರಕ್ಷಿಸಿದ ಡಬಲ್ ಏಜೆಂಟ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ‘ರೆಡ್ ಸೀ ಡೈವಿಂಗ್ ರೆಸಾರ್ಟ್’ (Red Sea Diving Resort) ಶತ್ರು ರಾಷ್ಟ್ರಗಳ ಭೂಮಿಯಲ್ಲಿ ಇಸ್ರೇಲ್ನ ವಿಶೇಷ ಪಡೆ ಮೊಸಾದ್ ಹೇಗೆ ಸಾಹಸಮಯ ಕಾರ್ಯಾಚರಣೆ ನಡೆಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇವುಗಳು ಮಾತ್ರವಲ್ಲದೆ, ಆಸ್ಕರ್ ವಿಜೇತ ‘ಆರ್ಗೊ’, ‘ಮ್ಯೂನಿಚ್’ ಇನ್ನೂ ಕೆಲವು ಸಿನಿಮಾಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಇಸ್ರೇಲ್ನ ಮೋಸಾದ್ ಬಗ್ಗೆ, ಇರಾನಿನ ಆಂತರಿಕ ಸಂಘರ್ಷಗಳ ಬಗ್ಗೆ ಕತೆಗಳನ್ನು ಒಳಗೊಂಡಿವೆ.
ಇದನ್ನೂ ಓದಿ:ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್ಗೆ ಮುಗಿಬಿದ್ದ ಜನ
ಡಾಕ್ಯುಮೆಂಟರಿ
ಇಸ್ರೇಲ್ ಅಂಡ್ ಇರಾನ್: ದಿ ಹಿಡನ್ ವಾರ್ (Israel and Iran: The Hidden War – 2022): ಇಸ್ರೇಲ್ ಮತ್ತು ಇರಾನ್ ನಡುವೆ ದಶಕಗಳಿಂದ ನಡೆಯುತ್ತಿರುವ ಗುಪ್ತ ಸಂಘರ್ಷವನ್ನು ಈ ಸಾಕ್ಷ್ಯಚಿತ್ರವು ಪರಿಶೋಧಿಸುತ್ತದೆ. ಇದರಲ್ಲಿ ಗುಪ್ತಚರ ಕಾರ್ಯಾಚರಣೆಗಳು, ಪರಮಾಣು ಉದ್ವಿಗ್ನತೆಗಳು ಮತ್ತು ಎರಡೂ ದೇಶಗಳ ನಡುವಿನ ಪ್ರತೀಕಾರದ ದಾಳಿಗಳ ಬಗ್ಗೆ ವಿವರಿಸಲಾಗಿದೆ.
ರಿಮೇಕಿಂಗ್ ದಿ ಮಿಡಲ್ ಈಸ್ಟ್: ಇಸ್ರೇಲ್ ವರ್ಸಸ್ ಇರಾನ್ (Remaking the Middle East: Israel vs. Iran): ಇದು ಸುಮಾರು 1 ಗಂಟೆ 54 ನಿಮಿಷಗಳ ವಿಶೇಷ ಸಾಕ್ಷ್ಯಚಿತ್ರ. ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾಕ್ಸಿ ಯುದ್ಧಗಳು ಹೇಗೆ ನೇರ ಸಂಘರ್ಷಕ್ಕೆ ಕಾರಣವಾದವು ಮತ್ತು ಈ ಪೈಪೋಟಿಯಲ್ಲಿ ಅಮೆರಿಕದ ಪಾತ್ರವೇನು ಎಂಬುದನ್ನು ಇದು ತೋರಿಸುತ್ತದೆ. ನಿಜ ದೃಶ್ಯಗಳು, ಸಂದರ್ಶನಗಳನ್ನು ಇದು ಒಳಗೊಂಡಿದೆ.
ದಿ ಬಿಗ್ ವಾರ್: ಇರಾನ್, ಲೆಬನಾನ್ ಅಂಡ್ ಇಸ್ರೇಲ್ (The Big War: Iran, Lebanon and Israel): ಲೆಬನಾನ್‌ನಲ್ಲಿ ಇರಾನ್‌ನ ಪ್ರಭಾವ ಮತ್ತು ಇಸ್ರೇಲ್‌ನೊಂದಿಗಿನ ಉದ್ವಿಗ್ನತೆಯಿಂದಾಗಿ ಬೆಳೆಯುತ್ತಿರುವ ಪ್ರಾದೇಶಿಕ ಸಂಘರ್ಷದ ಮೇಲೆ ಈ ಸಾಕ್ಷ್ಯಚಿತ್ರವು ಬೆಳಕು ಚೆಲ್ಲುತ್ತದೆ.
12 ಡೇಸ್ ದಟ್ ಶೂಕ್ ಇರಾನ್ (12 Days That Shook Iran): ಅಲ್ ಜಜೀರಾ ವಾಹಿನಿಯ ಈ ಸಾಕ್ಷ್ಯಚಿತ್ರವು 2025 ರ ಇಸ್ರೇಲ್-ಇರಾನ್ ಸಂಘರ್ಷದಿಂದ ಜನಸಾಮಾನ್ಯರ ಮೇಲೆ ಉಂಟಾದ ಪರಿಣಾಮದ ಬಗ್ಗೆ ವರದಿ ಇದೆ. ಇದು ಜನಪ್ರಿಯ ಸಾಕ್ಷ್ಯಚಿತ್ರ ಸಹ ಆಗಿದೆ.
ಇರಾನ್, ಇಸ್ರೇಲ್ ಅಂಡ್ ದಿ ಬಾಂಬ್ (Iran, Israel and the Bomb): ಈ ಎರಡು ರಾಷ್ಟ್ರಗಳ ನಡುವಿನ ಕಳೆದ ಮೂವತ್ತು ವರ್ಷಗಳ ಪರಮಾಣು ಮತ್ತು ವ್ಯೂಹಾತ್ಮಕ ಉದ್ವಿಗ್ನತೆಗಳ ಕುರಿತಾದ ಸಾಕ್ಷ್ಯಚಿತ್ರ ಇದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ