ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸುವ ಸುಲಭ ಟ್ರಿಕ್ಸ್Image Credit source: Getty Images
ಯಾವಾಗಲೂ ಅಡುಗೆ ಮನೆಯಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಈರುಳ್ಳಿಯೂ ಒಂದು. ಇದೊಂದಿದ್ದರೆ ನೀವು ನಾನಾ ರೀತಿಯ ಅಡುಗೆಗಳನ್ನು ಮಾಡಿ ತಿನ್ನಬಹುದು. ಆದರೆ ಈರುಳ್ಳಿ ಕತ್ತರಿಸಲು ಶುರು ಮಾಡಿದ ಕೆಲವೇ ಕ್ಷಣಗಳಲ್ಲಿ ಕಣ್ಣು ಉರಿ, ನೀರು ಬರುತ್ತದೆ. ಬಹುತೇಕ ಎಲ್ಲರಿಗೂ ಇದು ಸಾಮಾನ್ಯ ಅನುಭವ. ಆದರೆ ಆರೋಗ್ಯ ತಜ್ಞರು ಇದನ್ನು ದೇಹದ ಸಹಜ ರಕ್ಷಣಾ ಪ್ರತಿಕ್ರಿಯೆ ಎಂದು ಹೇಳುತ್ತಾರೆ. ಹಾಗಾಗಿ ಇದನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡುವ ಬದಲು ಇದನ್ನು ತಡೆಯಲು ಕೆಲವು ಸಿಂಪಲ್ ಟ್ರಿಕ್ಸ್ ಪಾಲಿಸಬಹುದು.
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಕ್ಕೆ ಕಾರಣ?
ಸಾಮಾನ್ಯವಾಗಿ ಈರುಳ್ಳಿ ಕತ್ತರಿಸಿದಾಗ ಸಿನ್-ಪ್ರೊಪನೆಥಿಯಲ್-ಎಸ್-ಆಕ್ಸೆಡ್ (Syn-Propanethial-S-oxide) ಎಂಬ ಅನಿಲ ಬಿಡುಗಡೆಯಾಗುತ್ತದೆ. ಈ ಅನಿಲ ಕಣ್ಣಿನ ತೇವಾಂಶದೊಂದಿಗೆ ಸೇರಿ ಸಣ್ಣ ಪ್ರಮಾಣದ ಆಮ್ಲವನ್ನು ರಚಿಸುತ್ತದೆ. ಇದನ್ನು ಕಣ್ಣಿಗೆ ಅಪಾಯವೆಂದು ಗುರುತಿಸಿ, ಆ ರಾಸಾಯನಿಕವನ್ನು ಹೊರಹಾಕಲು ಹೆಚ್ಚು ಕಣ್ಣೀರು ಉತ್ಪಾದಿಸುತ್ತದೆ. ಇದೇ ಕಾರಣಕ್ಕೆ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತದೆ.
ಇದನ್ನೂ ಓದಿ: ಬಿಂಬಳಕಾಯಿಯನ್ನು ಅಡುಗೆಯಲ್ಲಿ ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಬಳಸಬಹುದು!
ಕಣ್ಣೀರು ಬರದಂತೆ ಈ ಸರಳ ಉಪಾಯಗಳನ್ನು ಅನುಸರಿಸಿ
ಕಣ್ಣೀರು ಕಡಿಮೆ ಮಾಡಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು. ಈರುಳ್ಳಿಯನ್ನು 15–20 ನಿಮಿಷ ಫ್ರಿಜ್ನಲ್ಲಿ ಇಟ್ಟು ಬಳಿಕ ಕತ್ತರಿಸಿದರೆ ಅನಿಲದ ಪ್ರಮಾಣ ಕಡಿಮೆಯಾಗಬಹುದು. ಯಾವಾಗಲೂ ಹರಿತವಾದ ಚಾಕುವನ್ನೇ ಬಳಸಬೇಕು. ಏಕೆಂದರೆ ಮೊನಚಿಲ್ಲದ ಚಾಕು ಹೆಚ್ಚು ಕೋಶಗಳನ್ನು ನಾಶಮಾಡಿ ಹೆಚ್ಚಿನ ಅನಿಲ ಬಿಡುಗಡೆ ಮಾಡುತ್ತದೆ. ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್ ಅಥವಾ ಚಿಮ್ನಿ ಆನ್ ಮಾಡಿಕೊಂಡರೆ ಅನಿಲ ಬೇಗ ಹೊರಹೋಗುತ್ತದೆ. ಇದರ ಜೊತೆಗೆ ಈರುಳ್ಳಿಯ ಬೇರು ಬರುವ ಭಾಗವನ್ನು ಕೊನೆಯಲ್ಲಿ ಕತ್ತರಿಸಿ ಏಕೆಂದರೆ ಇದೇ ಭಾಗದಲ್ಲಿ ಕಣ್ಣಿಗೆ ಉರಿ ಉಂಟುಮಾಡುವ ಸಂಯುಕ್ತಗಳು ಹೆಚ್ಚಿರುತ್ತವೆ. ಕೆಲವರು ರಕ್ಷಣಾತ್ಮಕ ಕನ್ನಡಕ (Protective Glasses) ಬಳಸುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಲ್ಲಿ ಕೆಲವೊಮ್ಮೆ ಈ ಅನಿಲದ ಪರಿಣಾಮ ಸ್ವಲ್ಪ ಕಡಿಮೆ ಕಾಣಿಸಬಹುದು. ಆದರೆ ಲೆನ್ಸ್ ಹಾಕಿಕೊಂಡೇ ಈರುಳ್ಳಿ ಕತ್ತರಿಸುವಾಗ ಕೈಗಳನ್ನು ಸ್ವಚ್ಛವಾಗಿಡುವುದು ಅತ್ಯಗತ್ಯ.
ಈ ತಪ್ಪುಗಳನ್ನು ಮಾಡಬೇಡಿ
- ಈರುಳ್ಳಿ ಕತ್ತರಿಸುವಾಗ ಕಣ್ಣುಗಳನ್ನು ಕೈಯಿಂದ ಉಜ್ಜಬಾರದು.
- ಕೈಯಲ್ಲಿ ಈರುಳ್ಳಿ ರಸ ಇದ್ದರೆ ಮೊದಲು ಚೆನ್ನಾಗಿ ತೊಳೆದು ಬಳಿಕವೇ ಕಣ್ಣನ್ನು ಮುಟ್ಟಬೇಕು.
- ಕಣ್ಣಿನ ಉರಿ ಹಲವು ಗಂಟೆಗಳವರೆಗೆ ಮುಂದುವರಿದರೆ, ತೀವ್ರ ನೋವು, ಕೆಂಪಾಗುವುದು ಅಥವಾ ದೃಷ್ಟಿ ಮಸುಕಾಗುವುದು ಕಂಡುಬಂದರೆ ನೇತ್ರ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.
ಈರುಳ್ಳಿ ಆರೋಗ್ಯಕ್ಕೂ ಉತ್ತಮ. ಇದರಲ್ಲಿ ವಿಟಮಿನ್ C, ಆಂಟಿಆಕ್ಸಿಡೆಂಟ್ಗಳು ಮತ್ತು ಫ್ಲೇವನಾಯ್ಡ್ಗಳು ಇದ್ದು, ರೋಗನಿರೋಧಕ ಶಕ್ತಿ ಹಾಗೂ ಹೃದಯದ ಆರೋಗ್ಯಕ್ಕೆ ನೆರವಾಗುತ್ತವೆ. ಆದ್ದರಿಂದ ಕಣ್ಣೀರಿಗೆ ಹೆದರಿ ಈರುಳ್ಳಿಯನ್ನು ಆಹಾರದಿಂದ ದೂರವಿಡುವ ಅಗತ್ಯವಿಲ್ಲ; ಸರಿಯಾದ ವಿಧಾನದಲ್ಲಿ ಕತ್ತರಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ