ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಅವರು ಇಂದು (ಜುಲೈ 12) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಜನಪರ ಕಾರ್ಯಗಳ ಮೂಲಕ ಜನ್ಮದಿನವನ್ನು ವಿಶೇಷವಾಗಿಸುತ್ತಿದ್ದಾರೆ. ಇದರ ನಡುವೆ ಒಂದು ವಿಶೇಷ ಪ್ರೋಮೋ ಹಂಚಿಕೊಳ್ಳಲಾಗಿದೆ. ಶಿವರಾಜ್ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಒಂದಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು, ಸಂಪೂರ್ಣ ಗುಣಮುಖರಾಗಿ ಮರಳಿದರು. ಆದರೆ ಆ ಜರ್ನಿ ಹೇಗಿತ್ತು ಎಂಬುದು ಅಭಿಮಾನಿಗಳಿಗೆ ತಿಳಿದಿಲ್ಲ. ಆ ಬಗ್ಗೆ ಮೊದಲ ಬಾರಿಗೆ ಶಿವಣ್ಣ ಮತ್ತು ಅವರ ಕುಟುಂಬದವರು ಮಾತನಾಡಿದ್ದಾರೆ. ‘ಸರ್ವೈವರ್’ (Survivor) ಶೀರ್ಷಿಕೆಯಲ್ಲಿ ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಶೀಘ್ರದಲ್ಲೇ ಅದು ಬಿಡುಗಡೆ ಆಗಲಿದೆ.
‘ಗೀತಾ ಪಿಕ್ಚರ್ಸ್’ ಮೂಲಕ ನಿರ್ಮಾಣ:
ಗೀತಾ ಶಿವರಾಜ್ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ಅದರ ಪ್ರೋಮೋ ರಿಲೀಸ್ ಮಾಡಲಾಗಿದ್ದು, ಶಿವಣ್ಣ ಅವರ ಜೀವನದ ಕೆಲವು ಮಹತ್ವ ಘಟನೆಗಳನ್ನು ಇದರಲ್ಲಿ ಮೆಲುಕು ಹಾಕಲಾಗಿದೆ. ಗೀತಾ ಶಿವರಾಜ್ಕುಮಾರ್, ಮಧು ಬಂಗಾರಪ್ಪ, ನಿವೇದಿತಾ ಶಿವರಾಜ್ಕುಮಾರ್ ಮುಂತಾದವರು ಇದರಲ್ಲಿ ಮಾತನಾಡಿದ್ದಾರೆ.
ಶಿವರಾಜ್ಕುಮಾರ್ ಆಪ್ತರ ಮಾತುಗಳು:
ಶಿವಣ್ಣ ಅವರನ್ನು ಹತ್ತಿರದಿಂದ ಕಂಡಿರುವ ಕಿಚ್ಚ ಸುದೀಪ್, ಸಾಯಿ ಕುಮಾರ್, ಕಮಲ್ ಹಾಸನ್, ನಾಗಾರ್ಜುನ, ದುನಿಯಾ ವಿಜಯ್, ಡಾಲಿ ಧನಂಜಯ ಸೇರಿದಂತೆ ಹಲವರು ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅನಾರೋಗ್ಯದ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಮಾತುಗಳು ಕೂಡ ಈ ಸಾಕ್ಷ್ಯಚಿತ್ರದಲ್ಲಿವೆ.
ಆಸ್ಪತ್ರೆಯೊಳಗಿನ ದೃಶ್ಯಗಳು ಸಹ ಇರಲಿವೆ:
ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗ ಶಿವರಾಜ್ಕುಮಾರ್ ಅವರು ಯಾವ ರೀತಿ ಇದ್ದರು ಎಂಬುದು ಅಭಿಮಾನಿಗಳಿಗೆ ತಿಳಿದಿಲ್ಲ. ಆ ಬಗ್ಗೆ ಕೂಡ ‘ಸರ್ವೈವರ್’ ಸಾಕ್ಷ್ಯಚಿತ್ರದಲ್ಲಿ ವಿವರ ನೀಡಲಾಗುತ್ತಿದೆ. ಆಸ್ಪತ್ರೆಯೊಳಗಿನ ದೃಶ್ಯಗಳು ಕೂಡ ಇದರಲ್ಲಿ ಇವೆ. ಸದ್ಯಕ್ಕೆ ಇದರ ಪ್ರೋಮೋ ಮಾತ್ರ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಮತ್ತೆ ಲಾಯರ್ ಪಾತ್ರ ಮಾಡಿದ ಶಿವರಾಜ್ಕುಮಾರ್; ‘ಮಹಾನ್’ ಸಿನಿಮಾದಲ್ಲಿ ನಟನೆ
ಶಿವರಾಜ್ಕುಮಾರ್ ಅವರ ಎನರ್ಜಿಗೆ ಎಲ್ಲರೂ ಫಿದಾ ಆಗುತ್ತಾರೆ. ಅನಾರೋಗ್ಯ ಬಂದರೂ ಕೂಡ ಶಿವಣ್ಣ ಕುಗ್ಗಲಿಲ್ಲ. ಎಲ್ಲವನ್ನೂ ಎದುರಿಸಿ ಬಂದ ಅವರು ಮತ್ತೆ ಮೊದಲಿನಂತೆ ಆ್ಯಕ್ಟೀವ್ ಆಗಿದ್ದಾರೆ. ಅವರ ಈ ಜರ್ನಿಯು ಅನೇಕರಿಗೆ ಸ್ಫೂರ್ತಿ ತುಂಬುವಂತಿದೆ. ತಮ್ಮ ಕಷ್ಟದ ದಿನಗಳ ಬಗ್ಗೆ ಸ್ವತಃ ಶಿವರಾಜ್ಕುಮಾರ್ ಅವರು ಮಾತನಾಡಿರುವ ಈ ಸಾಕ್ಷ್ಯಚಿತ್ರವನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.