ಮಲಯಾಳಂ (Malayalam Movie) ಚಿತ್ರರಂಗವು ಸದಾ ವಿಭಿನ್ನ ಪ್ರಯೋಗಗಳಿಗೆ ಹೆಸರುವಾಸಿ. ಈ ಸಾಲಿಗೆ ಹೊಸ ಸೇರ್ಪಡೆ ‘ಭರತನಾಟ್ಯಂ 2: ಮೋಹಿನಿಯಾಟಂ’. ಕಳೆದ ಏಪ್ರಿಲ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಎನಿಸಿಕೊಂಡಿದ್ದ ಈ ಸಿನಿಮಾ, ಇದೀಗ ಮೇ 8ರಿಂದ ಜನಪ್ರಿಯ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದ್ದು, ಟ್ರೆಂಡಿಂಗ್ನಲ್ಲಿದೆ.
ಇದು 2024ರಲ್ಲಿ ತೆರೆಕಂಡಿದ್ದ ‘ಭರತನಾಟ್ಯಂ’ ಚಿತ್ರದ ಮುಂದುವರಿದ ಭಾಗ. ಹೀಗಾಗಿ, ಮೊದಲ ಭಾಗ ನೋಡಿ ಎರಡನೇ ಭಾಗ ನೋಡಿದರೆ ಸಿನಿಮಾ ಮತ್ತಷ್ಟು ಆಪ್ತವಾಗುತ್ತದೆ. ಮೊದಲ ಭಾಗವು ಕುಟುಂಬದೊಳಗಿನ ಸಣ್ಣಪುಟ್ಟ ಹಾಸ್ಯದ ಮೇಲೆ ಕೇಂದ್ರೀಕರಿಸಿದ್ದರೆ, ಈ ಎರಡನೇ ಭಾಗವು ಡಾರ್ಕ್ ಕಾಮಿಡಿ ಕ್ರೈಮ್ ಥ್ರಿಲ್ಲರ್ ಮಾದರಿಯಲ್ಲಿದೆ.
ಮೃತ ಭರತನ್ ನಾಯರ್ ಎರಡನೇ ಹೆಂಡತಿ ಮತ್ತು ಆಕೆಯ ಮಗನನ್ನು ಊರಿನಲ್ಲಿ ನೆಲೆಸುವಂತೆ ಮಾಡಲು ಹೊರಡುವ ಶಶಿ (ಸೈಜು ಕುರುಪ್) ಮತ್ತು ಆತನ ಕುಟುಂಬದ ಕಥೆ ಇದಾಗಿದೆ. ಆದರೆ, ತಂದೆಯ ಹಳೆಯ ಹಗರಣವೊಂದು ಹೊರಬಂದಾಗ ಕುಟುಂಬವು ಒಂದು ಕೊಲೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತದೆ. ಆ ಕಷ್ಟದಿಂದ ಪಾರಾಗಲು ಅವರು ಮಾಡುವ ಹರಸಾಹಸವೇ ಚಿತ್ರದ ಜೀವಾಳ.
ಮೂಲತಃ ಮಲಯಾಳಂ ಸಿನಿಮಾವಾದರೂ, ನೆಟ್ಫ್ಲಿಕ್ಸ್ನಲ್ಲಿ ಈ ಚಿತ್ರವು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿ ಲಭ್ಯವಿದೆ. ಭಾಷೆಯ ಅಡೆತಡೆಯಿಲ್ಲದೆ ಕನ್ನಡದ ಪ್ರೇಕ್ಷಕರು ಈ ಚಿತ್ರವನ್ನು ಆನಂದಿಸಬಹುದಾಗಿದೆ.
ಇದನ್ನೂ ಓದಿ: ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್
ಕೃಷ್ಣದಾಸ್ ಮುರಳಿ ನಿರ್ದೇಶನದ ಈ ಚಿತ್ರದಲ್ಲಿ ಸೈಜು ಕುರುಪ್, ಸೂರಜ್ ವೆಂಜಾರಮೂಡು, ಜಗದೀಶ್ ಮತ್ತು ವಿನಯ್ ಫೋರ್ಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ ಸೂರಜ್ ಅವರ ವಿಲನ್ ಪಾತ್ರ ಮತ್ತು ಮಲಯಾಳಂ ಶೈಲಿಯ ‘ಡಾರ್ಕ್ ಹ್ಯೂಮರ್’ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ಸಿನಿಮಾದ ಹೆಚ್ಚುಗಾರಿಕೆ. ವಾರಾಂತ್ಯದಲ್ಲಿ ನೀವು ಒಳ್ಳೆಯ ಸಸ್ಪೆನ್ಸ್ ಮತ್ತು ಕಾಮಿಡಿ ಸಿನಿಮಾವನ್ನು ನೋಡಲು ಬಯಸಿದರೆ, ನೆಟ್ಫ್ಲಿಕ್ಸ್ನಲ್ಲಿರುವ ‘ಭರತನಾಟ್ಯಂ 2: ಮೋಹಿನಿಯಾಟಂ’ ಖಂಡಿತವಾಗಿಯೂ ಉತ್ತಮ ಆಯ್ಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.