ನವದೆಹಲಿ, ಆಗಸ್ಟ್ 11: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹವು (Net Direct Tax Collections) ಶೇ. 23.09 ರಷ್ಟು ಭಾರಿ ಏರಿಕೆ ಕಂಡಿದೆ. ನಿನ್ನೆಯವರೆಗಿನ (ಆ. 10) ಅಂಕಿಅಂಶಗಳ ಪ್ರಕಾರ, ಒಟ್ಟು ನಿವ್ವಳ ನೇರ ತೆರಿಗೆ ₹8.11 ಲಕ್ಷ ಕೋಟಿ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಮೊತ್ತವು ₹6.59 ಲಕ್ಷ ಕೋಟಿಯಾಗಿತ್ತು. ಈ ವರ್ಷದಲ್ಲಿ ಭರ್ಜರಿ ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಇಲ್ಲಿ ನೇರ ತೆರಿಗೆ ಎಂದರೆ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ಆದಾಯ ತೆರಿಗೆ ಇತ್ಯಾದಿ ಆದಾಯಗಳಿಗೆ ವಿಧಿಸಲಾಗುವ ಟ್ಯಾಕ್ಸ್ ಆಗಿದೆ.
ಕಾರ್ಪೊರೇಟೇತರ ತೆರಿಗೆದಾರರ ಕೊಡುಗೆ
ಈ ಬಾರಿ ತೆರಿಗೆ ಸಂಗ್ರಹದ ಏರಿಕೆಯಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರು, ಎಚ್ಯುಎಫ್ (HUF) ಮತ್ತು ಸಂಸ್ಥೆಗಳನ್ನೊಳಗೊಂಡ ‘ಕಾರ್ಪೊರೇಟೇತರ’ (Non-Corporate Taxes) ವಿಭಾಗದ ಪಾತ್ರ ದೊಡ್ಡದಾಗಿದೆ. ಈ ವಿಭಾಗದಿಂದ ಹರಿದುಬಂದ ನಿವ್ವಳ ತೆರಿಗೆ ಮೊತ್ತವು ₹5.07 ಲಕ್ಷ ಕೋಟಿ ತಲುಪಿದ್ದು, ಕಳೆದ ವರ್ಷಕ್ಕೆ (₹4.11 ಲಕ್ಷ ಕೋಟಿ) ಹೋಲಿಸಿದರೆ ಸುಮಾರು 23.4% ಪ್ರಗತಿ ದಾಖಲಿಸಿದೆ.
ಇದನ್ನೂ ಓದಿ: ನಿಮ್ಮ ಬಳಿ ಆಧಾರ್ ಇದ್ರೆ ಸಾಕು ಇ-ಪ್ಯಾನ್ ಕಾರ್ಡ್ ಪಡೆಯೋದು ಸುಲಭ
ಕಾರ್ಪೊರೇಟ್ ತೆರಿಗೆ ಏರಿಕೆ
ಕಂಪನಿಗಳು ಮತ್ತು ಉದ್ಯಮ ವಲಯದಿಂದ ಪಾವತಿಯಾದ ನಿವ್ವಳ ಕಾರ್ಪೊರೇಟ್ ತೆರಿಗೆ (Corporate Tax) ಸಂಗ್ರಹವು ₹2.26 ಲಕ್ಷ ಕೋಟಿಯಿಂದ ₹2.70 ಲಕ್ಷ ಕೋಟಿಗೆ (19.8% ಏರಿಕೆ) ಹೆಚ್ಚಳವಾಗಿದೆ.
ಒಟ್ಟು ತೆರಿಗೆ ಸಂಗ್ರಹ ಹಾಗೂ ರಿಫಂಡ್
ಯಾವುದೇ ರಿಫಂಡ್ ನೀಡುವ ಮೊದಲು ಸಂಗ್ರಹವಾದ ಒಟ್ಟು ನೇರ ತೆರಿಗೆ (Gross Collection) ಮೊತ್ತವು ₹9.55 ಲಕ್ಷ ಕೋಟಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗ್ರಾಸ್ ಟ್ಯಾಕ್ಸ್ ಕಲೆಕ್ಷನ್ ₹7.97 ಲಕ್ಷ ಕೋಟಿ ಇತ್ತು. ಈ ವರ್ಷ 19.75% ಏರಿದೆ.
ಇಲಾಖೆಯು ಈ ಅವಧಿಯಲ್ಲಿ ₹1.43 ಲಕ್ಷ ಕೋಟಿ ಮೊತ್ತದ ರಿಫಂಡ್ (Refunds) ಅನ್ನು ತೆರಿಗೆದಾರರಿಗೆ ಹಿಂತಿರುಗಿಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 3.79 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ
ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಜಿಗಿತ
ಷೇರು ಮಾರುಕಟ್ಟೆ ವಹಿವಾಟಿನ ಮೇಲೆ ವಿಧಿಸುವ ‘ಎಸ್ಟಿಟಿ’ (STT) ಸಂಗ್ರಹದಲ್ಲಿ ಬೃಹತ್ ಜಿಗಿತ ಕಂಡುಬಂದಿದ್ದು, ಕಳೆದ ವರ್ಷದ ₹22,354 ಕೋಟಿಯಿಂದ ₹33,824 ಕೋಟಿಗೆ (ಸುಮಾರು 51% ಏರಿಕೆ) ಏರಿಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ