ಸಿನಿಮಾಗಳ (Cinema) ಟಿಕೆಟ್ ದರ ಗಗನಕ್ಕೇರಿ ಕೂತಿವೆ. ಒಟಿಟಿಗಳಲ್ಲಿ ನೋಡೋಣವೆಂದರೆ ಅವುಗಳ ಬೆಲೆಯೂ ಕಡಿಮೆ ಏನಿಲ್ಲ. ಅದು ಸಾಲದಕ್ಕೆ, ಒಟಿಟಿಗೆ ಹಣ ಕೊಟ್ಟಮೇಲೂ ಕೆಲ ಸಿನಿಮಾಗಳನ್ನು ನೋಡಲು ಹೆಚ್ಚುವರಿ ಹಣ ಕೊಡಬೇಕಾಗಿರುವ ಪರಿಸ್ಥಿತಿ ಇದೆ. ಪೈರಸಿ ಅಂತು ಈಗ ಬಹಳ ಕಷ್ಟ ಬಿಡಿ. ಸಿಡಿ-ಡಿವಿಡಿಗಳಂತೂ ನಿಂತೇ ಹೋಗಿವೆ. ಹೀಗಿರುವಾಗ, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್, ಮಂಚು ವಿಷ್ಣು ಅಂಥಹಾ ಸ್ಟಾರ್ ನಟರು ನಟಿಸಿರುವ ಸಿನಿಮಾ ಉಚಿತವಾಗಿ ನೋಡಲು ಸಿಕ್ಕರೆ? ಖಂಡಿತ ಈ ಅವಕಾಶ ಈಗ ವೀಕ್ಷಕರಿಗೆ ದೊರಕಿದೆ.
ಮಂಚು ವಿಷ್ಣು, ಪ್ರಭಾಸ್, ಮೋಹನ್ಲಾಲ್, ಅಕ್ಷಯ್ ಕುಮಾರ್, ಮೋಹನ್ಬಾಬು, ದೇವರಾಜ್ ಇನ್ನೂ ಕೆಲವು ಸ್ಟಾರ್ ನಟರು, ನಟಿಯರು ನಟಿಸಿರುವ ಸೂಪರ್ ಹಿಟ್ ಸಿನಿಮಾ ಇದೀಗ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ. ಈ ಸ್ಟಾರ್ ನಟರು ಒಟ್ಟಿಗೆ ನಟಿಸಿರುವ ತೆಲುಗಿನ ‘ಕಣ್ಣಪ್ಪ’ ಸಿನಿಮಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನೇ ಮಾಡಿತ್ತು. ಸುಮಾರು 200 ಕೋಟಿ ಹಣ ಗಳಿಕೆ ಮಾಡಿದೆ ಎಂದು ಚಿತ್ರತಂಡವೇ ಹೇಳಿಕೊಂಡಿತ್ತು.
ಇದನ್ನೂ ಓದಿ:‘ಆಲ್ಫಾ’ ಬಾಕ್ಸ್ ಆಫೀಸ್ ಕಲೆಕ್ಷನ್; ಎರಡನೇ ದಿನವೂ ಮಂಕಾದ ಅಲಿಯಾ ಭಟ್ ಸಿನಿಮಾ
ಆ ಸಿನಿಮಾ ಇದೀಗ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ಯೂಟ್ಯೂಬ್ನಲ್ಲಿ ಆಸಕ್ತ ಸಿನಿಮಾ ಪ್ರೇಮಿಗಳು ಸಿನಿಮಾವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಎವಿಎಎ ಎಂಟರ್ಟೈನ್ಮೆಂಟ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ‘ಕಣ್ಣಪ್ಪ’ ಸಿನಿಮಾವನ್ನು ನಿನ್ನೆಯಷ್ಟೆ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ‘ಕಣ್ಣಪ್ಪ’ ಸಿನಿಮಾ ಈ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಣೆಗೆ ಲಭ್ಯವಿದ್ದು, ಕೇವಲ ಒಂದೇ ದಿನಕ್ಕೆ ಲಕ್ಷಾಂತರ ಮಂದಿ ‘ಕಣ್ಣಪ್ಪ’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ‘ಕಣ್ಣಪ್ಪ’ ಸಿನಿಮಾದ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿಲ್ಲ. ಬಹುಷಃ ಸಿನಿಮಾದ ಹಿಂದಿ ಆವೃತ್ತಿಯನ್ನು ಟಿ-ಸೀರೀಸ್ ಅಥವಾ ಬೇರೆ ಯಾವುದಾದರೂ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಹೆಸರೇ ಹೇಳುತ್ತಿರುವಂತೆ ‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪನ ಕತೆ ಆಧರಿಸಿದ ಸಿನಿಮಾ. ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಬೇಡರ ಕಣ್ಣಪ್ಪನ ಸಿನಿಮಾ ಆಗಿದ್ದರೂ ಸಹ ಸಿನಿಮಾನಲ್ಲಿ ಗ್ಲಾಮರಸ್ ನಾಯಕಿ, ರೊಮ್ಯಾಂಟಿಕ್ ಹಾಡುಗಳು, ಹೀರೋನ ಉದ್ದುದ್ದ ಡೈಲಾಗ್ಗಳು, ಅತಿಯಾದ ಫೈಟ್ಗಳು, ಯಾವ ಯಾವುದೋ ಪಾತ್ರಗಳೆಲ್ಲ ಇದ್ದವು. ಇದೇ ಕಾರಣಕ್ಕೆ ಈ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿಮರ್ಶೆ, ಟೀಕೆ ಸಹ ವ್ಯಕ್ತವಾಗಿತ್ತು. ಇದೀಗ ಸಿನಿಮಾ ಯೂಟ್ಯೂಬ್ಗೆ ಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ