Headlines

ಉಡುಪಿ ಜಿಲ್ಲೆಯಲ್ಲಿ ಮನೆ ಕಳ್ಳತನ ತಡೆಗೆ ಪೊಲೀಸ್ ಇಲಾಖೆ ಮಾಸ್ಟರ್​​ ಪ್ಲಾನ್​​: ಹೊಸ ಯೋಜನೆ ಜಾರಿ – Kannada News | Udupi Police Launch New Locked House Beat System to Deter Burglaries

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಉಡುಪಿ, ಮೇ 11: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮನೆ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಡುಪಿ (Udupi) ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ‘ಲಾಕ್ಡ್ ಹೌಸ್ ಬಿಟ್ ಸಿಸ್ಟಮ್’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಸಾರ್ವಜನಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರಂಭಿಸಿರುವ ಈ ಯೋಜನೆ ಇದೀಗ ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿದೆ.

ಮುಖ್ಯಾಂಶಗಳು

  • ಉಡುಪಿಯಲ್ಲಿ ಮನೆ ಕಳ್ಳತನ ತಡೆಗೆ ಹೊಸ ಸಿಸ್ಟಮ್​
  • ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ
  • ಸಾರ್ವಜನಿಕರ ಸುರಕ್ಷತೆ ಮತ್ತಷ್ಟು ಬಲಪಡಿಸುವ ಉದ್ದೇಶ

ಪೊಲೀಸ್ ಇಲಾಖೆಗೆ ಸವಾಲಾದ ಮನೆ ಕಳ್ಳತನ ಪ್ರಕರಣಗಳು

ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಭಾಗಗಳಲ್ಲಿಯೂ ಮನೆಗಳಿಗೆ ಬೀಗ ಹಾಕಿ ಕುಟುಂಬ ಸಮೇತರಾಗಿ ಹೊರ ಊರುಗಳಿಗೆ ತೆರಳುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದೇ ಸಂದರ್ಭವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರು ಮನೆಗಳತನ ನಡೆಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಆತಂಕ ಮೂಡಿಸಿದ್ದವು. ವಿಶೇಷವಾಗಿ ಹಬ್ಬ-ಹರಿದಿನಗಳು, ಮದುವೆ ಸಮಾರಂಭಗಳು ಹಾಗೂ ಬೇಸಿಗೆ ರಜಾ ಅವಧಿಯಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು.

ಏನಿದು ಲಾಕ್ಡ್ ಹೌಸ್ ಬಿಟ್ ಸಿಸ್ಟಮ್? 

ಈ ಹಿನ್ನೆಲೆದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ‘ಲಾಕ್ಡ್ ಹೌಸ್ ಬಿಟ್ ಸಿಸ್ಟಮ್’ ಎಂಬ ಹೊಸ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಮನೆಗಳಿಗೆ ಬೀಗ ಹಾಕಿ ಕೆಲವು ದಿನಗಳ ಕಾಲ ಹೊರಗಡೆ ಹೋಗುವವರು ತಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಬೀಟ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬಹುದು. ಮನೆ ಮಾಲೀಕರು ನೀಡುವ ವಿವರಗಳನ್ನು ಪೊಲೀಸ್ ಇಲಾಖೆ ದಾಖಲಿಸಿಕೊಂಡು, ಆ ಮನೆಗಳ ಮೇಲೆ ವಿಶೇಷ ನಿಗಾವಹಿಸುವ ವ್ಯವಸ್ಥೆ ಕಲ್ಪಿಸಲಾಗುವುದು

ಇದನ್ನೂ ಓದಿ; ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ: 10ಕ್ಕೂ ಹೆಚ್ಚು ವೃಕ್ಷಗಳಿಗೆ ಕೊಡಲಿಯೇಟು

ಬೀಟ್ ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಆ ಮನೆಗಳ ಸುತ್ತಮುತ್ತ ಗಸ್ತು ತಿರುಗಿ ಪರಿಶೀಲನೆ ನಡೆಸಲಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದರೆ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ. ಇದರಿಂದ ಮನೆ ಕಳ್ಳತನ ಪ್ರಕರಣಗಳನ್ನು ತಡೆಯುವುದರ ಜೊತೆಗೆ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಹೆಚ್ಚಿಸುವ ಉದ್ದೇಶ ಇಲಾಖೆ ಹೊಂದಿದೆ. ಈ ಯೋಜನೆಯ ಮತ್ತೊಂದು ವಿಶೇಷ ಅಂಶವೆಂದರೆ ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ನೇರ ಸಂಪರ್ಕ ಹಾಗೂ ವಿಶ್ವಾಸವನ್ನು ಬಲಪಡಿಸುವುದು. ಮನೆ ಖಾಲಿ ಇರುವ ಮಾಹಿತಿ ನೀಡಿದ ನಂತರ ಸಂಬಂಧಪಟ್ಟ ಬೀಟ್ ಅಧಿಕಾರಿಗಳು ಮನೆ ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿದ್ದರೆ ತುರ್ತು ಮಾಹಿತಿ ನೀಡುತ್ತಾರೆ. ಕೆಲ ಪ್ರದೇಶಗಳಲ್ಲಿ ಪೊಲೀಸ್ ವಾಹನಗಳ ಮೂಲಕ ರಾತ್ರಿ ಪಹರೆ ಹೆಚ್ಚಿಸುವ ಯೋಜನೆಯೂ ರೂಪಿಸಲಾಗಿದೆ.

ಎಸ್​​​ಪಿ ಹರಿರಾಮ್‌ ಶಂಕರ್​​ ಹೇಳಿದ್ದಿಷ್ಟು

ಈ ಯೋಜನೆ ಕೇವಲ ಕಳ್ಳತನ ತಡೆಯುವ ಕಾರ್ಯಕ್ರಮವಲ್ಲ, ಬದಲಾಗಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಪ್ರಯತ್ನವಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದರೆ ಅಪರಾಧ ಪ್ರಕರಣಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಎಸ್​​​ಪಿ ಹರಿರಾಮ್‌ ಶಂಕರ್​​ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗೆ ‘ಕೂಲ್’ ಅನುಭವ: ಉರಿಬಿಸಿಲಿನ ನಡುವೆ ನೆರಳಿನ ಆಸರೆ ನೀಡಿದ ಪರ್ಯಾಯ ಶೀರೂರು ಮಠ

ಒಟ್ಟಾರೆ, ಲಾಕ್ಡ್ ಹೌಸ್ ಬಿಟ್ ಸಿಸ್ಟಮ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ಹೆಚ್ಚುವರಿ ಭದ್ರತೆಯ ಕವಚವಾಗುವ ನಿರೀಕ್ಷೆ ಮೂಡಿಸಿದೆ. ಮನೆಗಳಿಗೆ ಬೀಗ ಹಾಕಿ ಹೊರಗಡೆ ತೆರಳುವ ನಾಗರಿಕರಿಗೆ ಈ ಯೋಜನೆ ಹೆಚ್ಚಿನ ನೆಮ್ಮದಿ ನೀಡಲಿದ್ದು, ಕಳ್ಳರ ಚಟುವಟಿಕೆಗಳಿಗೂ ಬ್ರೇಕ್​ ಬೀಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *