Headlines

ಉಡುಪಿ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಟೆಸ್ಟ್: ಏರ್‌ಟೆಲ್, ಜಿಯೋ ಮುಂದು; ತೀರಾ ಹಿಂದಿರುವ ಬಿಎಸ್‌ಎನ್‌ಎಲ್! – Kannada News | TRAI Network Test in Udupi: Jio and Airtel Lead in Data Speed; BSNL Lagging Way Behind with High Call Drops

ಉಡುಪಿ, ಜುಲೈ 1: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಮಾರ್ಚ್ 2026ರಲ್ಲಿ ಕರ್ನಾಟಕ ʻಎಲ್ಎಸ್ಎʼ ವ್ಯಾಪ್ತಿಯ ಉಡುಪಿ ಜಿಲ್ಲೆಯಾದ್ಯಂತ ನಡೆಸಿದ ‘ಇಂಡಿಪೆಂಡೆಂಟ್ ಡ್ರೈವ್ ಟೆಸ್ಟ್’ (ಐಡಿಟಿ) ವರದಿ ಬಿಡುಗಡೆಯಾಗಿದ್ದು, ಜಿಲ್ಲೆಯ ಮೊಬೈಲ್ ನೆಟ್‌ವರ್ಕ್ ಸೇವೆಗಳ ನೈಜ ಚಿತ್ರಣ ಹೊರಬಿದ್ದಿದೆ. ಈ ವರದಿಯ ಪ್ರಕಾರ, ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್ ಮತ್ತು ಜಿಯೋ ಉತ್ತಮ ನೆಟ್‌ವರ್ಕ್ ಹಾಗೂ ಇಂಟರ್ನೆಟ್ ವೇಗ ಒದಗಿಸುತ್ತಿದ್ದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸೇವೆ ತೀರಾ ಕಳಪೆಯಾಗಿರುವುದು ಕಂಡುಬಂದಿದೆ.

ಟೆಲಿಕಾಂ ಸಂಸ್ಥೆಗಳು ನೀಡುವ ಸೇವೆಗಳ (ಧ್ವನಿ ಕರೆ ಮತ್ತು ಇಂಟರ್ನೆಟ್ ಡೇಟಾ) ನೈಜ ಗುಣಮಟ್ಟವನ್ನು ಅಳೆಯಲು ಮಾರ್ಚ್ 17 ರಿಂದ 20 ರವರೆಗೆ ಉಡುಪಿ ಜಿಲ್ಲೆಯಾದ್ಯಂತ ಟ್ರಾಯ್ ಈ ಪರೀಕ್ಷೆ ನಡೆಸಿತ್ತು. ನಗರ, ಗ್ರಾಮೀಣ, ಹೆದ್ದಾರಿ ಹಾಗೂ ಜನನಿಬಿಡ ಪ್ರದೇಶಗಳು ಸೇರಿದಂತೆ ವಿವಿಧ ಕಡೆಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿ ನೆಟ್‌ವರ್ಕ್‌ಗಳ ಕಾರ್ಯಾಚರಣೆಯನ್ನು ಆಧುನಿಕ ಸಾಧನಗಳ ಮೂಲಕ ಪರಿಶೀಲಿಸಲಾಗಿತ್ತು.

ಇದನ್ನೂ ಓದಿ: 11 ವರ್ಷ ಮಕ್ಕಳಿಲ್ಲದ ದಂಪತಿಗೆ ನಕಲಿ ದಾಖಲೆ ಸೃಷ್ಟಿಸಿ ಮಗು ಮಾರಿದ್ದ ಖ್ಯಾತ ವೈದ್ಯ ಅರೆಸ್ಟ್!

ಟ್ರಾಯ್ ಪರೀಕ್ಷೆಯಲ್ಲಿ ಬಹಿರಂಗವಾದ ಪ್ರಮುಖ ಅಂಶಗಳು

ಕಾಲ್ ಡ್ರಾಪ್ (ಕರೆ ಕಡಿತ) ಸಮಸ್ಯೆ: ಕರೆ ಮಾಡುವಾಗ ಅಥವಾ ಮಾತನಾಡುವಾಗ ಕರೆ ಕಡಿತಗೊಳ್ಳುವ ಸಮಸ್ಯೆಯು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ (Vi) ನೆಟ್‌ವರ್ಕ್‌ಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಏರ್‌ಟೆಲ್ ಮತ್ತು ಜಿಯೋ ಈ ವಿಚಾರದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿವೆ.

ಡೌನ್‌ಲೋಡ್ ವೇಗ: ಇಂಟರ್ನೆಟ್ ವೇಗದಲ್ಲಿ ಜಿಯೋ ಎಲ್ಲರಿಗಿಂತ ಮುಂದಿದೆ. ಜಿಯೋ ಸರಾಸರಿ 197.40 ಎಮ್‌ಬಿಪಿಎಸ್ ವೇಗ ನೀಡುತ್ತಿದ್ದರೆ, ಏರ್‌ಟೆಲ್ 96.45 ಎಮ್‌ಬಿಪಿಎಸ್, ವೊಡಾಫೋನ್ ಐಡಿಯಾ 23.09 ಎಮ್‌ಬಿಪಿಎಸ್ ವೇಗ ನೀಡುತ್ತಿವೆ. ಆದರೆ, ಬಿಎಸ್‌ಎನ್‌ಎಲ್ ಕೇವಲ 5.65 ಎಮ್‌ಬಿಪಿಎಸ್ ವೇಗದೊಂದಿಗೆ ತೀರಾ ಹಿಂದಿದೆ.

ಅಪ್‌ಲೋಡ್ ವೇಗ: ಫೈಲ್ ಅಥವಾ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ವೇಗದಲ್ಲಿ ಏರ್‌ಟೆಲ್ (17.00 ಎಮ್‌ಬಿಪಿಎಸ್) ಮುಂದಿದ್ದು, ಜಿಯೋ (14.78 ಎಮ್‌ಬಿಪಿಎಸ್) ಎರಡನೇ ಸ್ಥಾನದಲ್ಲಿದೆ. ಇಲ್ಲೂ ಕೂಡ ಬಿಎಸ್‌ಎನ್‌ಎಲ್ ಕೇವಲ 1.76 ಎಮ್‌ಬಿಪಿಎಸ್ ವೇಗ ದಾಖಲಿಸಿದೆ.

ಕಾಲ್ ಸೈಲೆನ್ಸ್: ಮಾತನಾಡುವಾಗ ಮೂರು ಸೆಕೆಂಡ್‌ಗಳಿಗಿಂತ ಹೆಚ್ಚು ಕಾಲ ಧ್ವನಿ ಕೇಳಿಸದ (ಕಾಲ್ ಸೈಲೆನ್ಸ್) ಸಮಸ್ಯೆ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ನೆಟ್‌ವರ್ಕ್‌ಗಳಲ್ಲಿ ಹೆಚ್ಚು ವರದಿಯಾಗಿದೆ.

ಪರೀಕ್ಷೆ ನಡೆದ ಪ್ರಮುಖ ಸ್ಥಳಗಳು

ಟ್ರಾಯ್ ತಂಡವು ಪಡುಬಿದ್ರಿ, ಸಂತೆಕಟ್ಟೆ, ಕೋಟ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ಮುಂತಾದ ನಗರ ಪ್ರದೇಶಗಳು; ಮಲ್ಪೆ ಬೀಚ್, ಸೇಂಟ್ ಮೇರಿಸ್ ದ್ವೀಪದಂತಹ ಕರಾವಳಿ ತೀರಗಳು ಮತ್ತು ಉಡುಪಿ ಕೃಷ್ಣ ಮಠ, ಜಿಲ್ಲಾಸ್ಪತ್ರೆ, ಮಣಿಪಾಲ ಕೆಎಂಸಿ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಿದೆ. ಈ ವರದಿಯನ್ನು ಎಲ್ಲಾ ಟೆಲಿಕಾಂ ಸಂಸ್ಥೆಗಳೊಂದಿಗೆ ಟ್ರಾಯ್ ಹಂಚಿಕೊಂಡಿದ್ದು, ಸೇವೆ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಗ್ರಾಹಕರು ಈ ವರದಿಯ ಸಂಪೂರ್ಣ ವಿವರಗಳನ್ನು ಟ್ರಾಯ್‌ನ ಅಧಿಕೃತ ವೆಬ್‌ಸೈಟ್‌ (www.trai.gov.in) ನಲ್ಲಿ ವೀಕ್ಷಿಸಬಹುದು ಎಂದು ಸಂವಹನ ಸಚಿವಾಲಯ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:23 pm, Wed, 1 July 26

Source link

Leave a Reply

Your email address will not be published. Required fields are marked *