ಮಂಗಳೂರು, ಜು.17: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸಮುದ್ರ ತೀರದಲ್ಲಿ ಇಂದು ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ದಂಡು ದಂಡಾಗಿ ಸಂಚರಿಸುವ ಬೂತಾಯಿ ಮೀನುಗಳು ಒಮ್ಮಿಂದೊಮ್ಮೆಗೆ ಕಡಲತೀರದ ಮರಳು ದಡಕ್ಕೆ ಬಂದು ಬಿದ್ದಿವೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಬೆಳ್ಳಿ ಹೊಳೆಯುವಂತೆ ಬಿದ್ದಿದ್ದ ಮೀನುಗಳ ರಾಶಿಯನ್ನು ಕಂಡು ಸ್ಥಳೀಯರು ಹಾಗೂ ಪ್ರವಾಸಿಗರು ಆಶ್ಚರ್ಯಚಕಿತರಾಗಿದ್ದಾರೆ. ಬೂತಾಯಿ ಮೀನುಗಳು ಯಾವಾಗಲೂ ಸಮುದ್ರದಲ್ಲಿ ಲಕ್ಷಾಂತರ ಸಂಖ್ಯೆಯ ದೊಡ್ಡ ಗುಂಪುಗಳಲ್ಲಿ ಒಟ್ಟಾಗಿ ಸಂಚರಿಸುತ್ತವೆ. ಇಂದು ಕೂಡ ಇಂತಹದ್ದೇ ಒಂದು ಬೃಹತ್ ಗುಂಪು ಸಾಗುತ್ತಿರುವಾಗ, ಆಕಸ್ಮಿಕವಾಗಿ ನಾಡದೋಣಿಯೊಂದು ಆ ಮೀನುಗಳ ಹಿಂಡಿಗೆ ಅಡ್ಡ ಬಂದಿದೆ. ಇದರಿಂದ ಹೆದರಿದ ಮೀನುಗಳ ಹಿಂಡು ದಿಕ್ಕು ತಪ್ಪಿ ತನ್ನ ಪಥವನ್ನು ಬದಲಾಯಿಸಿ ದಡದ ಕಡೆಗೆ ಮುಖ ಮಾಡಿದೆ. ಇದೇ ವೇಳೆ ಕಡಲಿನಲ್ಲಿ ಎದ್ದ ದೊಡ್ಡ ಅಲೆಗಳು ಈ ಮೀನಿನ ಗುಂಪಿನ ಮೇಲೆ ಅತ್ಯಂತ ಜೋರಾಗಿ ಅಪ್ಪಳಿಸಿದೆ. ಅಲೆಗಳ ರಭಸಕ್ಕೆ ಸಿಲುಕಿದ ಇಡೀ ಮೀನಿನ ಸಮೂಹವು ಒಮ್ಮೆಗೇ ಉಳ್ಳಾಲ ಕಡಲತೀರದ ದಡಕ್ಕೆ ಬಂದು ಬಿದ್ದಿದೆ.ಅಲೆಗಳ ರಭಸಕ್ಕೆ ದಡದ ಮರಳಿನ ಮೇಲೆ ಬಂದು ಬಿದ್ದ ಮೀನುಗಳಿಗೆ ವಾಪಾಸ್ ನೀರಿಗೆ ಹೋಗಲು ಸಾಧ್ಯವಾಗದೆ ತೀರದಲ್ಲೇ ಸಿಲುಕಿಕೊಂಡಿವೆ. ಕಡಲತೀರದಲ್ಲಿ ಜೀವಂತ ಬೂತಾಯಿ ಮೀನುಗಳು ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಉಳ್ಳಾಲದ ಸುತ್ತಮುತ್ತಲಿನ ನೂರಾರು ಜನರು ತೀರದ ಕಡೆಗೆ ಓಡೋಡಿ ಬಂದಿದ್ದಾರೆ. ಜನ ಕೈಗೆ ಸಿಕ್ಕ ಬಕೆಟ್ಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಬುಟ್ಟಿಗಳನ್ನು ಹಿಡಿದುಕೊಂಡು ಮುಗಿಬಿದ್ದು ಮೀನುಗಳನ್ನು ತುಂಬಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ