ರಾಮನಗರ, ಆ.18: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ (FDA) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬಿಡದಿ ಸಮೀಪದ ಹೆಜ್ಜಾಲ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಬೃಹತ್ ನಕಲಿ ಔಷಧ ತಯಾರಿಕಾ ಮತ್ತು ಮರು-ಪ್ಯಾಕಿಂಗ್ ದಂಧೆಯನ್ನು ಭೇದಿಸಿದ್ದಾರೆ. ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ಹಾಗೂ ಅಪರ ಔಷಧ ನಿಯಂತ್ರಕ ಡಾ. ಉಮೇಶ್ ಅವರ ನೇತೃತ್ವದಲ್ಲಿ ನಡೆಸಿದ ಈ ದಾಳಿಯಲ್ಲಿ 5 ಕೋಟಿ ರೂ.ಗೂ ಅಧಿಕ ಮೌಲ್ಯದ ನಕಲಿ ಔಷಧಗಳನ್ನು ಜಪ್ತಿ ಮಾಡಲಾಗಿದೆ. ಖ್ಯಾತ ಬಹುರಾಷ್ಟ್ರೀಯ (MNC) ಹಾಗೂ ಪ್ರಸಿದ್ಧ ಬ್ರ್ಯಾಂಡೆಡ್ ಕಂಪನಿಗಳ ಹೆಸರಿನ ನಕಲಿ ಲೇಬಲ್ಗಳನ್ನು ಬಳಸಿ ಔಷಧಗಳನ್ನು ಮರು-ಪ್ಯಾಕ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿತ್ತು. ಯಾವುದೇ ಸರ್ಕಾರಿ ಲೈಸೆನ್ಸ್ ಹಾಗೂ ಪರವಾನಗಿ ಇಲ್ಲದೆ ರಹಸ್ಯವಾಗಿ ಈ ಆವರಣದಲ್ಲಿ ನಕಲಿ ಔಷಧ ತಯಾರಿಕೆ ಮತ್ತು ಪ್ಯಾಕಿಂಗ್ ಪ್ರಕ್ರಿಯೆ ನಡೆಯುತ್ತಿತ್ತು. ದಾಳಿಯ ವೇಳೆ ಸ್ಥಳದಲ್ಲಿದ್ದ ಭಾರಿ ಪ್ರಮಾಣದ ನಕಲಿ ಮಾತ್ರೆಗಳು, ಕಚ್ಚಾವಸ್ತುಗಳು ಹಾಗೂ ಲೇಬಲಿಂಗ್ ಸಾಮಗ್ರಿಗಳ ಒಟ್ಟು ಮೌಲ್ಯ ಅಂದಾಜು 5 ಕೋಟಿಗೂ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ನೇತೃತ್ವದ ವಿಶೇಷ ತಂಡವು ಸ್ಥಳದಲ್ಲಿದ್ದ ಪ್ರತಿಯೊಂದು ಕಚ್ಚಾವಸ್ತು ಹಾಗೂ ಔಷಧೀಯ ಸಾಮಗ್ರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೀಲ್ ಮಾಡಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ