
ನವದೆಹಲಿ, ಮಾರ್ಚ್ 16: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರ ಪುತ್ರಿ ಹಿಮಾಯನಿ ಪುರಿ ಹಲವಾರು ವ್ಯಕ್ತಿಗಳು ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವ್ಯಕ್ತಿಗಳು ಮತ್ತು ಪ್ಲಾಟ್ಫಾರ್ಮ್ಗಳು ತಮ್ಮ ಬಗ್ಗೆ ಮಾನಹಾನಿಕರ ವಿಷಯವನ್ನು ಹರಡುತ್ತಿದ್ದು, ಕ್ರಿಮಿನಲ್ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಕಲ್ಪಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ದೆಹಲು ಹೈಕೋರ್ಟ್ನಲ್ಲಿ 10 ಕೋಟಿ ರೂ.ಗಳ ಸಿವಿಲ್ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.
ಎಎನ್ಐ ವರದಿ ಪ್ರಕಾರ, ಹಿಮಾಯನಿ ಪುರಿ ತಮ್ಮ ಅರ್ಜಿಯಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ತಮ್ಮ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧವನ್ನು ತಪ್ಪು ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ. ಈ ವಿಷಯವು ತಮ್ಮ ಖ್ಯಾತಿ ಮತ್ತು ವೈಯಕ್ತಿಕ ವಿಶ್ವಾಸಾರ್ಹತೆಗೆ ಗಂಭೀರ ಹಾನಿಯನ್ನುಂಟುಮಾಡಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಎಪ್ಸ್ಟೀನ್ ಫೈಲ್ಸ್ ಎಂದರೇನು? ಟ್ರಂಪ್ ಹೆಸರಿರುವುದು ನಿಜವೇ? ಎಲಾನ್ ಮಸ್ಕ್ ಆರೋಪವೇನು?
ಹಿಮಾಯನಿ ಪುರಿ ಅವರು ಜೆಫ್ರಿ ಎಪ್ಸ್ಟೀನ್ ಜೊತೆ ನೇರ ಅಥವಾ ಪರೋಕ್ಷ ವ್ಯವಹಾರ, ಹಣಕಾಸು, ವೈಯಕ್ತಿಕ ಅಥವಾ ನೆಟ್ವರ್ಕ್ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಸೂಚಿಸುವ ಆಧಾರರಹಿತ ಆರೋಪಗಳನ್ನು ಪ್ರತಿವಾದಿಗಳು ಸೃಷ್ಟಿಸಿದ್ದಾರೆ ಮತ್ತು ಪ್ರಸಾರ ಮಾಡಿದ್ದಾರೆ. ಅವರು ಎಪ್ಸ್ಟೀನ್ ಅಥವಾ ಅವರ ಸಹಚರರಿಂದ ಹಣಕಾಸಿನ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಲೆಹ್ಮನ್ ಬ್ರದರ್ಸ್ನ ಪತನಕ್ಕೆ ರಾಬರ್ಟ್ ಮಿಲ್ಲಾರ್ಡ್ ಪುರಿಯವರೊಂದಿಗೆ ಕೆಲಸ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಪ್ರಕಟಿಸಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ಆರೋಪಗಳು “ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತವಾದುದು” ಎಂದು ಹಿಮಾಯನಿ ಪುರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎಕ್ಸ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಲಿಂಕ್ಡ್ಇನ್ ಸೇರಿದಂತೆ ಹಲವಾರು ಪ್ಲಾಟ್ಫಾರ್ಮ್ಗಳು, ಬ್ಲಾಗ್ಗಳು ಮತ್ತು ಡಿಜಿಟಲ್ ಸುದ್ದಿ ಪೋರ್ಟಲ್ಗಳಲ್ಲಿ ಈ ವಿಷಯವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇವು ವರದಿಗಳು, ಪೋಸ್ಟ್ಗಳು, ವೀಡಿಯೊಗಳು, ಕಿರುಚಿತ್ರಗಳು, ಥಂಬ್ನೇಲ್ಗಳು ಮತ್ತು ಹೆಡ್ಲೈನ್ಗಳ ಮೂಲಕ ಸುಳ್ಳು ನಿಸುದ್ದಿಗಳನ್ನು ಹರಡಿದೆ ಮತ್ತು ತಮ್ಮ ಖ್ಯಾತಿಗೆ ಹಾನಿ ಮಾಡಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಜೆಫ್ರಿ ಎಪ್ಸ್ಟೀನ್ ದಾಖಲೆ; ಪಟ್ಟಿಯಲ್ಲಿದೆ ಪ್ರಮುಖರ ಹೆಸರು, ಏನಿದು ಪ್ರಕರಣ?
ಹೀಗಾಗಿ, ವಿವಾದಿತ ವಿಷಯವನ್ನು ಡಿಲೀಟ್ ಮಾಡಲು ನ್ಯಾಯಾಲಯದ ಆದೇಶ, ಮುಂದಿನ ದಿನಗಳಲ್ಲಿ ಅಂತಹ ವಿಷಯವನ್ನು ಪ್ರಕಟಿಸದಂತೆ ಶಾಶ್ವತ ತಡೆಯಾಜ್ಞೆ, 10 ಕೋಟಿ ರೂ. ಪರಿಹಾರ ಮತ್ತು ಪ್ರತಿವಾದಿಗಳಿಂದ ಬೇಷರತ್ತಾದ ಕ್ಷಮೆಯಾಚನೆಯನ್ನು ಹಿಮಾಯನಿ ಪುರಿ ಕೋರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ