ಚಿತ್ರದಲ್ಲಿರುವುದು ಸತ್ಯಂ ಠಾಕೂರ್. ಚಿರತೆಯ ಫೋಟೋ ಸಾಂದರ್ಭಿಕ.Image Credit source: PTI
ಭೋಪಾಲ್, ಮೇ 10: ಅನಿರೀಕ್ಷಿತವಾಗಿ ಎರಗಿ ಬರುವ ಅಪಾಯಗಳನ್ನು ಎದುರಿಸಲು ಸಮಯಪ್ರಜ್ಞೆ, ಧೈರ್ಯ ಬೇಕು. ಮಧ್ಯಪ್ರದೇಶದ 13 ವರ್ಷದ ಬಾಲಕನೊಬ್ಬ ಸಮಯಪ್ರಜ್ಞೆ ಮತ್ತು ಧೈರ್ಯ ತೋರಿ ಚಿರತೆ ಬಾಯಿಗೆ (Leopard Attack) ಆಹಾರವಾಗುವುದರಿಂದ ತಪ್ಪಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಹೋಶಂಗಾಬಾದ್ನ ಪಿಪರಿಯಾ ಅರಣ್ಯ ಪ್ರದೇಶಕ್ಕೆ ಸೇರಿದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 8ನೇ ತರಗತಿಯ ಬಾಲಕ ಸತ್ಯಂ ಠಾಕೂರ್ ಈ ಸಾಹಸ ತೋರಿದವ.
ತನ್ನ ಮನೆಯ ಬಳಿ ಇರುವ ಜಮೀನಿನಲ್ಲಿ ಸತ್ಯಂ ಆಟವಾಡುತ್ತಿರುವಾಗ ಹತ್ತಿರದಲ್ಲೇ ಪೊದೆಯೊಂದರಲ್ಲಿ ಅಡಗಿದ್ದ ಚಿರತೆ ದಿಢೀರನೇ ಬಾಲಕನ ಮೇಲೆ ಎರಗಿದೆ. ಕೊಡಲಿ, ಮಚ್ಚು, ದೊಣ್ಣೆ ಇತ್ಯಾದಿ ಯಾವುದೇ ಆಯುಧ ಇಲ್ಲದ ಬಾಲಕ ಬರಿಗೈಯಲ್ಲೇ ಚಿರತೆಯನ್ನು ಎದುರಿಸಿದ್ದಾರೆ. ಎರಗಿ ಬಂದ ಆ ಕ್ರೂರ ಪ್ರಾಣಿಯ ಕತ್ತನ್ನು ಹಿಡಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಚಿರತೆಯ ಉಗುರು ಪರಚಿ ಬಾಲಕನಿಗೆ ವಿವಿಧೆಡೆ ಗಾಯಗಳಾಗಿವೆ. ಆದರೆ, ಪ್ರಾಣ ಉಳಿದಿದೆ.
ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ
‘ನಾನು ಬಾವಿ ಸಮೀಪ ಆಡುತ್ತಿದ್ದಾಗ ದಿಢೀರನೇ ಚಿರತೆ ದಾಳಿ ಮಾಡಿತು. ನಾನು ಅದರ ಕತ್ತನ್ನು ಹಿಡಿದುಕೊಂಡೆ. ಅದು ನನ್ನ ಹೊಟ್ಟೆ ಮತ್ತು ಕಾಲನ್ನು ಪರಚಿತು. ನಾನು ಜೋರಾಗಿ ಕಿರುಚಿ ಅದನ್ನು ತಳ್ಳಿದೆ,’ ಎಂದು ಈ 13 ವರ್ಷದ ಬಾಲಕ ಸತ್ಯಂ ಠಾಕೂರ್ ಆ ಭೀಕರ ಘಟನೆಯ ವಿವರ ನೀಡುತ್ತಾನೆ.
ಸಂಜೆ 7ಕ್ಕೆ ಈ ಬಾಲಕನ ಕಿರುಚಾಟ ಕೇಳಿ ಆತನ ತಂದೆ ಮಹೇಂದ್ರ ಸಿಂಗ್ ಠಾಕೂರ್ ಹಾಗೂ ಇತರ ಕುಟುಂಬ ಸದಸ್ಯರು ಬಡಿಗೆಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸುತ್ತಾರೆ. ಅಲ್ಲಿ ಬಾಲಕ ಆ ಚಿರತೆಯ ಕತ್ತು ಹಿಡಿಕೊಂಡು ತಡೆದು ನಿಲ್ಲಿಸಿರುತ್ತಾನೆ. ಜನರು ಕಿರಿಚುತ್ತಾ ಬಂದಾಗ ಚಿರತೆ ಹೆದರಿ ಕಾಡಿಗೆ ಓಡಿ ಹೋಗುತ್ತದೆ.
ಇದನ್ನೂ ಓದಿ: ಬ್ಲಾಸ್ಟ್ ಬೆದರಿಕೆ, ಜಿಲೆಟಿನ್ ಪತ್ತೆ; ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್ ತಂದ ಭದ್ರತೆ
ಬಾಲಕನ ಹೊಟ್ಟೆ, ಕೈ ಮತ್ತು ಕಾಲುಗಳಿಗೆ ಚಿರತೆ ಉಗುರು ಪರಿಚಿದ್ದರಿಂದ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಡಳಿತದ ವತಿಯಿಂದ ಚಿಕಿತ್ಸೆಗೆ ತತ್ಕ್ಷಣವೇ ಒಂದಷ್ಟು ಹಣಸಹಾಯ ಕೊಡಲಾಗಿದೆ.
ಅರಣ್ಯಾಧಿಕಾರಿಗಳು ಈ ಘಟನೆಯನ್ನು ಗಂಭೀರವೆಂದು ಬಣ್ಣಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಓಡಾಟ ಸಾಮಾನ್ಯವೇ ಆಗಿರುತ್ತದೆ. ಆದರೆ, ಮಕ್ಕಳ ಮೇಲೆ ಅವುಗಳು ದಾಳಿ ಮಾಡುವುದು ಅಪರೂಪ ಎನ್ನುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ