ಬೆಂಗಳೂರು, ಜುಲೈ 10: ಬೆಂಗಳೂರಿನಲ್ಲಿ (Bengaluru) ಎಲೆಕ್ಟ್ರಿಕ್ ಆಟೋರಿಕ್ಷಾಗಳ (E-Autos) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಸಾರಿಗೆ ಇಲಾಖೆಯು, ಇನ್ಮುಂದೆ ಎಲೆಕ್ಟ್ರಿಕ್ ಆಟೋಗಳಿಗೂ ಆಟೋ ಪರ್ಮಿಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಕೇವಲ ಸಿಎನ್ಜಿ, ಎಲ್ಪಿಜಿ ಮತ್ತು ಪೆಟ್ರೋಲ್ ಆಟೋಗಳಿಗೆ ಮಾತ್ರ ಪರ್ಮಿಟ್ ಹೊಂದುವುದು ಕಡ್ಡಾಯವಾಗಿತ್ತು. ಆದರೆ, ಇವಿ ಆಟೋಗಳ ಹೆಚ್ಚಳ ಮತ್ತು ಅದರಿಂದಾಗುತ್ತಿರುವ ಕಾನೂನು ತೊಡಕುಗಳನ್ನು ಗಮನಿಸಿ ಸಾರಿಗೆ ಇಲಾಖೆ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಹೊಸ ನಿಯಮದ ಪ್ರಕಾರ, ಇನ್ಮುಂದೆ ಎಲೆಕ್ಟ್ರಿಕ್ ಆಟೋ ಖರೀದಿ ಮಾಡಬೇಕಾದರೂ ಚಾಲನಾ ಪರವಾನಗಿ (DL) ಮತ್ತು ಆಟೋ ಪರ್ಮಿಟ್ ಇರಲೇಬೇಕು. ಇವೆರಡೂ ಇಲ್ಲದಿದ್ದರೆ ಹೊಸದಾಗಿ ಎಲೆಕ್ಟ್ರಿಕ್ ಆಟೋ ಖರೀದಿಸಲು ಸಾಧ್ಯವಾಗುವುದಿಲ್ಲ.
ಪ್ರಯಾಣಿಕರ ಸುರಕ್ಷತೆ ಮತ್ತು ಇನ್ಶುರೆನ್ಸ್ ಕ್ಲೈಮ್ ಪ್ರಮುಖ ಕಾರಣ
ಸಾರಿಗೆ ಇಲಾಖೆಯ ಈ ಕ್ರಮಕ್ಕೆ ಮುಖ್ಯ ಕಾರಣ ಪ್ರಯಾಣಿಕರ ಸುರಕ್ಷತೆ. ಪರ್ಮಿಟ್ ಇಲ್ಲದ ಆಟೋಗಳಲ್ಲಿ ಸಾರ್ವಜನಿಕರು ಪ್ರಯಾಣಿಸುವಾಗ ಒಂದು ವೇಳೆ ದುರದೃಷ್ಟವಶಾತ್ ಅಪಘಾತ ಸಂಭವಿಸಿದರೆ, ಇನ್ಶುರೆನ್ಸ್ ಕಂಪನಿಗಳಿಂದ ಆ ಪ್ರಯಾಣಿಕರಿಗೆ ಅಥವಾ ಚಾಲಕರಿಗೆ ಒಂದು ರೂಪಾಯಿ ಪರಿಹಾರವೂ ಸಿಗುವುದಿಲ್ಲ. ನಿಯಮಾವಳಿಗಳ ಪ್ರಕಾರ ಪರ್ಮಿಟ್ ಇಲ್ಲದ ವಾಹನಗಳಿಗೆ ವಿಮಾ ಸೌಲಭ್ಯ ಅನ್ವಯಿಸುವುದಿಲ್ಲ. ಸಾಮಾನ್ಯ ಆಟೋಗಳಿಗೆ ಪರ್ಮಿಟ್ ಪಡೆಯಲು ಸಾರಿಗೆ ಇಲಾಖೆಗೆ 500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಆಟೋಗಳಿಗೆ ಸಾರಿಗೆ ಇಲಾಖೆಯು ಸಂಪೂರ್ಣ ಉಚಿತವಾಗಿ ಆಟೋ ಪರ್ಮಿಟ್ ನೀಡಲು ನಿರ್ಧರಿಸಿದೆ.
ಶೋರೂಮ್ಗಳ ತಪ್ಪು ಮಾಹಿತಿ ಮತ್ತು ಅಗ್ರಿಗೇಟರ್ ಕಂಪನಿಗಳ ಅಕ್ರಮಕ್ಕೆ ಬ್ರೇಕ್
ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ಆಟೋ ಶೋರೂಮ್ಗಳ ಮಾಲೀಕರು ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಆಟೋ ಚಾಲಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದರು. ‘ಸಿಎನ್ಜಿ, ಎಲ್ಪಿಜಿ ಆಟೋಗಳಿಗೆ ಮಾತ್ರ ಪರ್ಮಿಟ್ ಬೇಕು, ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ನ ಅಗತ್ಯವಿಲ್ಲ’ ಎಂದು ನಂಬಿಸಿ ಸಾವಿರಾರು ಇವಿ ಆಟೋಗಳನ್ನು ಸೇಲ್ ಮಾಡಿದ್ದರು. ಬೆಂಗಳೂರಿನಲ್ಲಿ ಸದ್ಯ ಸುಮಾರು 3 ಲಕ್ಷಕ್ಕೂ ಅಧಿಕ ಸಿಎನ್ಜಿ ಮತ್ತು ಎಲ್ಪಿಜಿ ಆಟೋಗಳಿದ್ದು, ಅವೆಲ್ಲವೂ ಪರ್ಮಿಟ್ ಹೊಂದಿವೆ. ಆದರೆ, ಎಲೆಕ್ಟ್ರಿಕ್ ಆಟೋಗಳಲ್ಲಿ ಮಾತ್ರ ಪರ್ಮಿಟ್ ಇರಲಿಲ್ಲ.
ಇದರ ಲಾಭ ಪಡೆದ ಕೆಲವು ಪ್ರಮುಖ ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು, ಪರ್ಮಿಟ್ ನಿಯಮಗಳಿಲ್ಲದ ಕಾರಣ ಸಾವಿರಾರು ಎಲೆಕ್ಟ್ರಿಕ್ ಆಟೋಗಳನ್ನು ಸಾರಾಸಗಟಾಗಿ ಖರೀದಿ ಮಾಡಿದ್ದವು. ಅಲ್ಲದೆ, ಹೊರರಾಜ್ಯದ ಚಾಲಕರನ್ನು ಕರೆತಂದು ಇಲ್ಲಿ ಆಟೋ ಓಡಿಸಲು ಬಿಟ್ಟಿದ್ದವು. ಇದು ಸ್ಥಳೀಯ ಕನ್ನಡಿಗ ಆಟೋ ಚಾಲಕರ ಜೀವನೋಪಾಯಕ್ಕೆ ಧಕ್ಕೆ ತಂದಿದ್ದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪರ್ಮಿಟ್ ಕಡ್ಡಾಯ ಮಾಡಿರುವುದರಿಂದ ಇಂತಹ ಕಾರ್ಪೊರೇಟ್ ಅಕ್ರಮಗಳಿಗೆ ಹಾಗೂ ಹೊರರಾಜ್ಯದ ಚಾಲಕರ ಅನಧಿಕೃತ ಹಾವಳಿಗೆ ಸಂಪೂರ್ಣ ಬ್ರೇಕ್ ಬೀಳುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ