‘ಸ್ಪೈಡರ್ ಮ್ಯಾನ್’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಜುಲೈ 30ರಂದು ಬಿಡುಗಡೆ ಆಯ್ತು. ಟಾಮ್ ಹಾಲೆಂಡ್, ‘ಸ್ಪೈಡರ್ ಮ್ಯಾನ್’ ಆಗಿ ನಟಿಸುತ್ತಿರುವ ಕೊನೆಯ ಸಿನಿಮಾ ಇದು ಎನ್ನಲಾಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ ಸಹ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ವಿಶೇಷವಾಗಿ ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಹಿಂದೆ ಇದ್ದ ಎಲ್ಲ ದಾಖಲೆಗಳನ್ನು ಬಿಡುಗಡೆ ಆದ ಕೇವಲ ಒಂಬತ್ತೇ ದಿನದಲ್ಲಿ ಒಡೆದು ಹಾಕಿದೆ.
ಜುಲೈ 30ರಂದು ಬಿಡುಗಡೆ ಆದ ಈ ಸಿನಿಮಾ, ಈ ಹಿಂದೆ ಇನ್ಯಾವ ಹಾಲಿವುಡ್ ಸಿನಿಮಾ ಮಾತ್ರವಲ್ಲ, ಭಾರತದ ಕೆಲವು ಸ್ಟಾರ್ ನಟರ ಸಿನಿಮಾಗಳು ಸಹ ಮಾಡದ ಓಪನಿಂಗ್ ಡೇ ಕಲೆಕ್ಷನ್ ಮಾಡಿತ್ತು. ಮೊದಲ ದಿನವೇ ಸುಮಾರು 80 ಕೋಟಿ ಗಳಿಕೆ ಮಾಡಿತ್ತು. ಈಗ ಬಿಡುಗಡೆ ಆಗಿ ಒಂಬತ್ತು ದಿನಗಳಾದರೂ ಸಹ ಸಿನಿಮಾದ ಗಳಿಕೆ ಇಳಿಮುಖವಾಗಿಲ್ಲ. ಎರಡನೇ ಶನಿವಾರ ಎಂದರೆ ನಿನ್ನೆಯ ಗಳಿಕೆ ದೊಡ್ಡ ಮಟ್ಟದಲ್ಲಿಯೇ ಆಗಿದೆ.
‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ತನ್ನ ಎರಡನೇ ಶನಿವಾರದಂದು ಹಿಂದಿನ ದಿನಕ್ಕಿಂತ ಬರೋಬ್ಬರಿ 105% ಏರಿಕೆಯನ್ನು ಕಂಡು ಅಬ್ಬರಿಸಿದೆ. ಎರಡನೇ ಶನಿವಾರ ಎಂದರೆ ಆಗಸ್ಟ್ 08ರಂದು ಸುಮಾರು 36.50 ಕೋಟಿ ರೂ. ಹಣವನ್ನು ಭಾರತದ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದೆ. ಇದರೊಂದಿಗೆ ಒಂಬತ್ತು ದಿನಗಳ ಒಟ್ಟು ಗಳಿಕೆ ಸುಮಾರು 444 ಕೋಟಿ ರೂ. ತಲುಪಿದೆ. ಟಾಮ್ ಹಾಲೆಂಡ್ ನಟನೆಯ ಈ ಚಿತ್ರವು ಎರಡನೇ ವಾರಾಂತ್ಯದಲ್ಲಿ 90 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ. ಇದರೊಂದಿಗೆ ಇದು ‘ಅವತಾರ್: ದಿ ವೇ ಆಫ್ ವಾಟರ್’ ಅನ್ನು ಹಿಂದಿಕ್ಕಿ ಭಾರತದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಿತ್ರವಾಗಿ ಹೊರಹೊಮ್ಮಲಿದೆ.
ಇದನ್ನೂ ಓದಿ:ಭಾರತದಲ್ಲಿ ‘ಸ್ಪೈಡರ್ ಮ್ಯಾನ್’ ಹೊಸ ದಾಖಲೆ; ಎರಡು ದಿನಕ್ಕೆ 130 ಕೋಟಿ ಗಳಿಕೆ
ಈಗಾಗಲೇ 444 ಕೋಟಿ ಗಳಿಕೆ ಮಾಡಿರುವ ಈ ಸಿನಿಮಾ ಶೀಘ್ರದಲ್ಲೇ 500 ಕೋಟಿ ರೂ. ಗಳಿಕೆಯ ಮೈಲಿಗಲ್ಲನ್ನು ತಲುಪಲಿದೆ, ಈ ಹಿಂದೆ, ‘ಅವತಾರ್’ ಆ ಬಳಿಕ ‘ಅವೇಂಜರ್ಸ್: ದಿ ಎಂಡ್ ಗೇಮ್’ ಸಿನಿಮಾಗಳು ಭಾರಿ ಮೊತ್ತವನ್ನು ಭಾರತದಲ್ಲಿ ಗಳಿಸಿದ್ದವು. ಅದಾದ ಬಳಿಕ ‘ಅವತಾರ್: ದಿ ವೇ ಆಫ್ ವಾಟರ್’ 500 ಕೋಟಿ ಸನಿಹಕ್ಕೆ ಬಂದಿತ್ತು. ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ ಸಿನಿಮಾ ಎಂಬ ಖ್ಯಾತಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾಕ್ಕಿದೆ. ಆದರೆ ಇದೀಗ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಆ ದಾಖಲೆಯನ್ನು ನಿರಾಯಾಸವಾಗಿ ಮುರಿದು ಹಾಕುತ್ತಿದೆ.
‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಈಗ ವಿಶ್ವ ಬಾಕ್ಸ್ ಆಫೀಸ್ನಲ್ಲಿ ‘ಆಲ್-ಟೈಮ್ ಬ್ಲಾಕ್ಬಸ್ಟರ್’ (ಎಟಿಟಿಬಿ) ಪಟ್ಟಿ ಸೇರಿಕೊಂಡಿದೆ. 1994ರ ‘ಜುರಾಸಿಕ್ ಪಾರ್ಕ್’ ನಂತರ ಬಹುಶಃ ಕೆಲವು ಚಿತ್ರಗಳನ್ನು ಮಾತ್ರ ಎಟಿಟಿಬಿ ಎಂದು ವರ್ಗೀಕರಿಸಲಾಗಿದೆ. ಅವುಗಳೆಂದರೆ ‘ಟೈಟಾನಿಕ್’, ‘ಅವತಾರ್’, ‘ದಿ ಜಂಗಲ್ ಬುಕ್’, ‘ಅವೆಂಜರ್ಸ್: ಇನ್ಫಿನಿಟಿ ವಾರ್’, ‘ಅವೆಂಜರ್ಸ್: ಎಂಡ್ಗೇಮ್’ ಮತ್ತು ‘ಅವತಾರ್: ದಿ ವೇ ಆಫ್ ವಾಟರ್’. ಇನ್ನುಳಿದಂತೆ ‘ಸ್ಪೈಡರ್ ಮ್ಯಾನ್ 3’, ‘2012’ ಮತ್ತು ‘ಫ್ಯೂರಿಯಸ್ 7’ ಪಟ್ಟಿಯಲ್ಲಿವೆ. ಈಗ ಹೊಸ ಸ್ಪಡರ್ ಮ್ಯಾನ್ ಸಿನಿಮಾ ಸಹ ಅದೇ ಪಟ್ಟಿಗೆ ಸೇರಿಕೊಳ್ಳುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ