Headlines

ಎಸ್. ಜಾನಕಿ ನಿಧನದ ಬೆನ್ನಲ್ಲೇ ಮೊಮ್ಮಗಳಿಗೆ ಟ್ರೋಲ್ ಕಾಟ; ಕಣ್ಣೀರು ಹಾಕಿಲ್ಲ ಎಂದವರಿಗೆ ಅಪ್ಸರಾ ಸ್ಪಷ್ಟನೆ – Kannada News | S Janaki Granddaughter Apsara Vydyula reacts to trolls on social media for No Tears

ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ (S Janaki) ಅವರು ಇತ್ತೀಚೆಗೆ ನಿಧನರಾಗಿದ್ದು, ಮೈಸೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಆದರೆ, ಈ ದುಃಖದ ಸಂದರ್ಭದಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ವಿಕೃತಿ ಮೆರೆದಿದ್ದಾರೆ. ಜಾನಕಿ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ ಅವರ ಮೊಮ್ಮಗಳು ಅಪ್ಸರಾ (Apsara Vydyula) ಅವರ ಕಣ್ಣಿನಲ್ಲಿ ನೀರಿಲ್ಲ, ಅವರು ಅಳುತ್ತಿಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದರು. ಇದೀಗ ಈ ಟ್ರೋಲ್‌ಗಳಿಗೆ ಅಪ್ಸರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಭಾವುಕ ಹಾಗೂ ಖಡಕ್ ಉತ್ತರ ನೀಡಿದ್ದಾರೆ.

ಅಳಲಿಲ್ಲ ಎಂದು ನನ್ನ ದುಃಖವನ್ನು ಅಳೆಯಬೇಡಿ:

ತಮ್ಮ ಕಣ್ಣೀರಿನ ಬಗ್ಗೆ ಪ್ರಶ್ನಿಸಿದವರಿಗೆ ಅಪ್ಸರಾ ಉತ್ತರಿಸಿದ್ದಾರೆ. ‘ಕಳೆದ ಕೆಲವು ದಿನಗಳಿಂದ ನನ್ನ ಕಣ್ಣಿನಲ್ಲಿ ನೀರಿಲ್ಲದ ಕಾರಣದಿಂದ ಹಲವರು ನನ್ನ ದುಃಖವನ್ನು ಪ್ರಶ್ನಿಸುತ್ತಿರುವುದನ್ನು ನಾನು ನೋಡಿದ್ದೇನೆ. ದಯವಿಟ್ಟು ನನ್ನ ಕಣ್ಣಿನಲ್ಲಿ ಕಾಣುವ ಅಥವಾ ಕಾಣದಿರುವ ಕಣ್ಣೀರಿನ ಆಧಾರದ ಮೇಲೆ ನನ್ನ ಅಜ್ಜಿಯ ಮೇಲಿರುವ ನನ್ನ ಪ್ರೀತಿಯನ್ನು ಅಳೆಯಬೇಡಿ. ಸಾವು ಎಂಬುದನ್ನು ಅತ್ಯಂತ ಆಧ್ಯಾತ್ಮಿಕವಾಗಿ ಅರ್ಥಮಾಡಿಕೊಳ್ಳುವುದನ್ನು ನನ್ನ ಅಜ್ಜಿ ನಮಗೆ ಕಲಿಸಿಕೊಟ್ಟಿದ್ದಾರೆ. ಜೀವನ ಕೊನೆಗೊಂಡ ತಕ್ಷಣ ಪ್ರೀತಿ ಕೊನೆಗೊಳ್ಳುವುದಿಲ್ಲ ಎಂಬುದನ್ನು ಅವರು ನಮಗೆ ತಿಳಿಸಿದ್ದಾರೆ. ನನ್ನ ಅನುಭವಗಳು ನನ್ನನ್ನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಗಟ್ಟಿಯಾಗಿಸಿವೆ. ದುಃಖ ಎನ್ನುವುದು ಯಾವಾಗಲೂ ಜೋರಾಗಿ ಅತ್ತು ತೋರಿಸುವುದಲ್ಲ, ಕೆಲವೊಮ್ಮೆ ಅದು ನಿಶ್ಯಬ್ದವಾಗಿ, ಸ್ಥಿರವಾಗಿ ಮತ್ತು ಅತ್ಯಂತ ವೈಯಕ್ತಿಕವಾಗಿರುತ್ತದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಅಜ್ಜಿ ಪಕ್ಕ ನಿಲ್ಲಬೇಕಿದ್ದ ಅಕ್ಕನೇ ಇಲ್ಲ:

ತಮ್ಮ ಕುಟುಂಬದ ಮತ್ತೊಂದು ಕಹಿ ಘಟನೆಯನ್ನು ನೆನೆದ ಅಪ್ಸರಾ, ‘ನನ್ನ ಅಜ್ಜಿಗೆ ಜಗತ್ತಿನಲ್ಲಿ ಅತ್ಯಂತ ಪ್ರೀತಿಯ ವ್ಯಕ್ತಿ ಎಂದರೆ ನನ್ನ ಅಕ್ಕ ವರ್ಷಾ. ಅವರಿಬ್ಬರೂ ಒಂದೇ ತರಹ ಇದ್ದರು. ಮಾತುಗಳಿಗೂ ಮೀರಿದ ಬಾಂಧವ್ಯ ಅವರದ್ದಾಗಿತ್ತು. ಇಂದು ನಾನು ನಿಂತಿರುವ ಜಾಗದಲ್ಲಿ ನಿಂತು, ಅಜ್ಜಿಯನ್ನು ನೋಡಿಕೊಳ್ಳಬೇಕಾಗಿದ್ದು ಮತ್ತು ಈ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದ್ದು ನನ್ನ ಅಕ್ಕ ವರ್ಷಾ. ಆದರೆ ಅವಳು ಆಗಸ್ಟ್ 2023ರಲ್ಲಿ ನಮ್ಮನ್ನು ಅಗಲಿದಳು. ಆ ನಷ್ಟದಿಂದ ನಮ್ಮ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ. ದುಃಖ ಎಂಬುದು ಎಂದಿಗೂ ಮಾಯವಾಗುವುದಿಲ್ಲ. ಅದನ್ನು ಜೀವನಪೂರ್ತಿ ಹೊತ್ತು ಸಾಗುವುದನ್ನು ಕಲಿಯಬೇಕಷ್ಟೇ’ ಎಂದು ಬರೆದುಕೊಂಡಿದ್ದಾರೆ.

‘ಸಾರ್ವಜನಿಕ ಜೀವನದಲ್ಲಿ ಇದ್ದಾಗ ಜನರು ನಮ್ಮ ಬಗ್ಗೆ ಕಥೆಗಳನ್ನು ಕಟ್ಟುವುದು, ವದಂತಿಗಳನ್ನು ಹರಡುವುದು ಸಾಮಾನ್ಯ. ನಮ್ಮ ಕುಟುಂಬದ ಬಗ್ಗೆ ಸರಿಯಾಗಿ ತಿಳಿಯದವರು ಈ ರೀತಿ ಅಭಿಪ್ರಾಯಗಳನ್ನು ರೂಪಿಸುವುದು ನೋವು ತರುತ್ತದೆ. ನನ್ನ ಅಜ್ಜಿ ಅತ್ಯಂತ ದಯಾಮಯಿ, ವಿನಮ್ರ ಸ್ವಭಾವದವರಾಗಿದ್ದರು. ನನ್ನ ಅಕ್ಕ ವರ್ಷಾ ಕೂಡ ಹಾಗೇ ಇದ್ದಳು. ಅವರಿಬ್ಬರೂ ಈಗ ಒಂದಾಗಿದ್ದಾರೆ ಎನ್ನುವ ಆಲೋಚನೆಯೇ ನನಗೆ ನೆಮ್ಮದಿ ನೀಡುತ್ತಿದೆ’ ಎಂದು ಅಪ್ಸರಾ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು

ಸಂಪ್ರದಾಯ ಮುರಿದು ಅಂತ್ಯಸಂಸ್ಕಾರ ನೆರವೇರಿಸಿದ್ದ ಅಪ್ಸರಾ:

ವೈದಿಕ ಮಂತ್ರ ಘೋಷಗಳ ನಡುವೆ ಅಜ್ಜಿಯ ಚಿತೆಗೆ ಮೊಮ್ಮಗಳು ಅಪ್ಸರಾ ಅವರೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಸಾಮಾನ್ಯವಾಗಿ ಪುರುಷರು ಮಾತ್ರ ಅಂತ್ಯಸಂಸ್ಕಾರ ಮಾಡಬೇಕು ಎಂಬ ಸಾಂಪ್ರದಾಯಿಕ ನಿಯಮವನ್ನು ಬದಿಗಿಟ್ಟು, ಮಡಕೆ ಹೊತ್ತು ಚಿತೆಯ ಸುತ್ತ ಪ್ರದಕ್ಷಿಣೆ ಹಾಕಿ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ್ದರು. ಅಂದಹಾಗೆ, ಅಪ್ಸರಾ ಅವರು ಎಸ್. ಜಾನಕಿ ಪುತ್ರ ಮುರಳಿ ಕೃಷ್ಣ ಅವರ ಮಗಳಾಗಿದ್ದಾರೆ. ಮುರಳಿ ಕೃಷ್ಣ ಅವರು ಕೂಡ ಇದೇ ವರ್ಷ ಜನವರಿ 22ರಂದು ನಿಧನರಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *