ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ಆಯೋಜನೆಯಾಗಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ಗೆ ಭಾರತ ತಂಡ ಹೇಗಿರಬೇಕೆಂದು ತಿಳಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್. ಆರ್ಸಿಬಿ ತಂಡದ ಮೆಂಟರ್ ಡಿಕೆ ಮುಂಬರುವ ವಿಶ್ವಕಪ್ಗೆ 15 ಸದಸ್ಯರ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ ಈ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
- ಆರಂಭಿಕ ಆಟಗಾರರು: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್.
- ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್
- ವಿಕೆಟ್ ಕೀಪರ್ಗಳು: ಕೆ.ಎಲ್ ರಾಹುಲ್, ಇಶಾನ್ ಕಿಶನ್.
- ಆಲ್-ರೌಂಡರ್ಗಳು: ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ
- ಸ್ಪಿನ್ ಬೌಲರ್: ಕುಲ್ದೀಪ್ ಯಾದವ್.
- ವೇಗದ ಬೌಲರ್ಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಭುವನೇಶ್ವರ ಕುಮಾರ್.
ದಿನೇಶ್ ಕಾರ್ತಿಕ್ ಹೆಸರಿಸಿರುವ 15 ಸದಸ್ಯರುಗಳ ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಇವರಲ್ಲಿ ಕೆಲವರು ಪ್ರಸ್ತುತ ಟೀಮ್ ಇಂಡಿಯಾದ ಭಾಗವಾಗಿಲ್ಲ ಎಂಬುದು ವಿಶೇಷ. ಹೀಗಾಗಿಯೇ ಡಿಕೆ ಹೆಸರಿಸಿರುವ ಈ ತಂಡವು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ರೋಹಿತ್-ವಿರಾಟ್ ಫಿಟ್ನೆಸ್ ಮೇಲೆ ಭರವಸೆ:
2027ರ ಹೊತ್ತಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ವಯಸ್ಸು 38 ದಾಟಲಿದ್ದರೂ, ಅವರ ಅನುಭವ ತಂಡಕ್ಕೆ ಅತಿ ಅಗತ್ಯ ಎಂದು ಕಾರ್ತಿಕ್ ನಂಬಿದ್ದಾರೆ.
“ರೋಹಿತ್ ಮತ್ತು ವಿರಾಟ್ ತಂಡದಲ್ಲಿದ್ದರೆ ಯಾವುದೇ ಆತಂಕ ಇರುವುದಿಲ್ಲ, ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ,” ಎಂದು ಈ ಹಿಂದೆ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಭುವಿ, ಶಮಿ ಅಚ್ಚರಿಯ ಆಯ್ಕೆ!
ದಿನೇಶ್ ಕಾರ್ತಿಕ್ ಅವರ ತಂಡದಲ್ಲಿ ಅತ್ಯಂತ ದೊಡ್ಡ ಅಚ್ಚರಿಯೆಂದರೆ ಅನುಭವಿ ವೇಗಿಗಳಾದ ಭುವನೇಶ್ವರ ಕುಮಾರ್ ಹಾಗೂ ಮೊಹಮ್ಮದ್ ಶಮಿಯ ಸೇರ್ಪಡೆ. ದೀರ್ಘಕಾಲದಿಂದ ಏಕದಿನ ಕ್ರಿಕೆಟ್ನಿಂದ ದೂರವಿರುವ ‘ಭುವಿ’ ಅವರ ಸ್ವಿಂಗ್ ಬೌಲಿಂಗ್ ಸೌತ್ ಆಫ್ರಿಕಾದ ಪಿಚ್ಗಳಲ್ಲಿ ನೆರವಾಗಲಿದೆ ಎಂಬುದು ಡಿಕೆ ಲೆಕ್ಕಾಚಾರ.
ಹಾಗೆಯೇ ಟೀಮ್ ಇಂಡಿಯಾದಿಂದ ಈಗಾಗಲೇ ಹೊರಬಿದ್ದಿರುವ ಮೊಹಮ್ಮದ್ ಶಮಿ ಅವರ ಅನುಭವ ವಿಶ್ವಕಪ್ನಂತಹ ಟೂರ್ನಿಗಳಲ್ಲಿ ಅತ್ಯಗತ್ಯ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಅಂದರೆ ದಿನೇಶ್ ಕಾರ್ತಿಕ್ ಅವರ ಪ್ರಕಾರ, ಏಕದಿನ ವಿಶ್ವಕಪ್ನಂತಹ ದೊಡ್ಡ ಟೂರ್ನಿ ಗೆಲ್ಲಬೇಕಿದ್ದರೆ ಅನುಭವಿ ಆಟಗಾರರು ಅತ್ಯಗತ್ಯ. ಅದರಲ್ಲೂ ಅನುಭವಿ ಬೌಲರ್ಗಳು ತಂಡದಲ್ಲಿ ಇರಬೇಕೆಂದು ತಿಳಿಸಿದ್ದಾರೆ. ಹೀಗಾಗಿಯೇ ಡಿಕೆ ತಮ್ಮ ತಂಡದಲ್ಲಿ ವೇಗದ ಬೌಲರ್ಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಭುವನೇಶ್ವರ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ದಿನೇಶ್ ಕಾರ್ತಿಕ್ ಆರಿಸಿರುವ ಈ 15 ಸದಸ್ಯರ ಬಲಿಷ್ಠ ಪಡೆ ಕೇವಲ ಕಾಗದದ ಮೇಲಷ್ಟೇ ಅಲ್ಲ, ಮೈದಾನದಲ್ಲೂ ಎದುರಾಳಿಗಳಿಗೆ ನಡುಕ ಹುಟ್ಟಿಸಬಲ್ಲ ಸಾಮರ್ಥ್ಯ ಹೊಂದಿದೆ. ಗಿಲ್ ಅವರ ಯುವ ನಾಯಕತ್ವ, ರೋಹಿತ್-ವಿರಾಟ್ ಅವರ ಅಪಾರ ಅನುಭವ ಹಾಗೂ ಬುಮ್ರಾ-ಶಮಿ ಅವರ ವೇಗದ ದಾಳಿ ತಂಡದ ಅತಿ ದೊಡ್ಡ ಬಲವಾಗಿದೆ. ಈ ಸಮತೋಲಿತ ಸಂಯೋಜನೆಯೊಂದಿಗೆ ಕಣಕ್ಕಿಳಿದರೆ, 2027ರ ವಿಶ್ವಕಪ್ನಲ್ಲಿ ಭಾರತ ತಂಡ ಟ್ರೋಫಿ ಎತ್ತಿ ಹಿಡಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಇದನ್ನೂ ಓದಿ: ಭಾರತ vs ಬ್ರೆಝಿಲ್ ಪಂದ್ಯಕ್ಕೆ ಡೇಟ್ ಫಿಕ್ಸ್!
DK’s ಏಕದಿನ ವಿಶ್ವಕಪ್ ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ಕೆಎಲ್ ರಾಹುಲ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ ಕುಮಾರ್.