ಐಪಿಎಲ್ 2026ರ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿಯು ಅಭಿಮಾನಿಗಳಿಗೆ ಕೇವಲ ಆಟದ ರೋಮಾಂಚನವನ್ನಷ್ಟೇ ನೀಡಲಿಲ್ಲ, ಬದಲಿಗೆ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಯಿತು. ಮೇ 2ರಂದು ನಡೆದ ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಡಗೌಟ್‌ನಲ್ಲಿ ಅತ್ಯಂತ ನಿರಾಶೆ ಮತ್ತು ಅಸಮಾಧಾನದಿಂದ ಕುಳಿತಿದ್ದ ದೃಶ್ಯಗಳು ಈಗ ಕ್ರೀಡಾ ಲೋಕದಲ್ಲಿ ಚರ್ಚೆಗೆ ಕಾರಣವಾಗಿವೆ.
ಈ ಪಂದ್ಯದ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ತೆಗೆದುಕೊಳ್ಳುತ್ತಿದ್ದ ಕೆಲ ನಿರ್ಧಾರಗಳಿಂದ, ಪ್ರಮುಖವಾಗಿ ಬೌಲಿಂಗ್ ಬದಲಾವಣೆಗಳ ವೇಳೆ ರೋಹಿತ್ ಶರ್ಮಾ ಡಗೌಟ್‌ನಲ್ಲಿ ನಿರಾಸೆ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಅಲ್ಲದೆ ತಂಡದ ಒಟ್ಟಾರೆ ಪ್ರದರ್ಶನವನ್ನು ನೋಡಿ ಹತಾಶರಾಗಿ ಕೂತಿದ್ದರು. ಇದೀಗ ಹಿಟ್ಮ್ಯಾನ್ ಅವರ ಈ ಭಾವನಾತ್ಮಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2024ರಲ್ಲೇ ನಿರಾಸೆ ವ್ಯಕ್ತಪಡಿಸಿದ್ದ ಹಿಟ್ಮ್ಯಾನ್!
ಐಪಿಎಲ್ 2024ರ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವಿನ ಖಾಸಗಿ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಈ ವಿಡಿಯೋದಲ್ಲಿ ರೋಹಿತ್ ಶರ್ಮಾ, ಒಂದೊಂದಾಗಿ ಎಲ್ಲವೂ ಬದಲಾಗುತ್ತಿದೆ… ಅದು ಅವರ ಇಷ್ಟ, ನಾನದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಆದ ಬದಲಾವಣೆಗಳ ಬಗ್ಗೆ ಅವರು ಈ ಮಾತು ಹೇಳಿರಬಹುದು ಎಂದು ವಿಶ್ಲೇಷಿಸಲಾಗಿತ್ತು.
ಅಷ್ಟೇ ಅಲ್ಲದೆ ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ತಮ್ಮ ದಶಕದ ಸುದೀರ್ಘ ಸಂಬಂಧವನ್ನು ಸ್ಮರಿಸಿದ ರೋಹಿತ್, “ಏನೇ ಆದರೂ ಇದು ನನ್ನ ಮನೆ. ಈ ತಂಡವನ್ನು ಕಟ್ಟಿದ್ದು ನಾನು” ಎಂದು ಭಾವುಕರಾಗಿ ನುಡಿದಿದ್ದರು. ಇದೀಗ ಅದೇ ತಂಡದ ಕುಸಿತವನ್ನು ರೋಹಿತ್ ಶರ್ಮಾ ಕಣ್ಣಾರೆ ಕಾಣುತ್ತಿದ್ದಾರೆ. ಇದಕ್ಕೆ ಸಾಕ್ಷಿ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಹಿಟ್ಮ್ಯಾನ್ ಮುಖದಲ್ಲಿ ಕಾಣಿಸಿಕೊಂಡ ಹಾವಭಾವ.
ರೋಹಿತ್ ಶರ್ಮಾ ಬೇಸರಕ್ಕೆ ಕಾರಣವೇನು?
- ಗಾಯದ ಸಮಸ್ಯೆ ಮತ್ತು ಅಸಹಾಯಕತೆ: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ರೋಹಿತ್, ಈ ಮಹತ್ವದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ತಮ್ಮ ನೆಚ್ಚಿನ ತಂಡ ಸಂಕಷ್ಟದಲ್ಲಿರುವಾಗ ಮೈದಾನಕ್ಕಿಳಿದು ನೆರವಾಗಲು ಸಾಧ್ಯವಾಗದ ಅಸಹಾಯಕತೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
- ತಂಡದ ಕಳಪೆ ಪ್ರದರ್ಶನ: ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 159 ರನ್‌ಗಳಿಗೆ ಸೀಮಿತವಾಯಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್‌ಕೆ, ತುತುರಾಜ್ ಗಾಯಕ್ವಾಡ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ತನ್ನ ತಂಡದ ಸತತ ಸೋಲು ರೋಹಿತ್ ಅವರ ಬೇಸರಕ್ಕೆ ಮುಖ್ಯ ಕಾರಣವಾಗಿತ್ತು.
- ಅಂಕಪಟ್ಟಿಯಲ್ಲಿ ಕುಸಿತ: ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು. 9 ಪಂದ್ಯಗಳಲ್ಲಿ ಕೇವಲ ಎರಡು ಜಯ ದಾಖಲಿಸಿರುವ ಮುಂಬೈ ತಂಡಕ್ಕೆ ಪ್ಲೇ-ಆಫ್ ಹಾದಿ ಬಹುತೇಕ ಮುಚ್ಚಿಹೋಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಅವರ ಈ ಫೋಟೋಗಳು ವೈರಲ್ ಆಗಿದ್ದು, “ಮುಂಬೈ ಸಾಮ್ರಾಜ್ಯವನ್ನು ಕಟ್ಟಿದ ವ್ಯಕ್ತಿ ಇಂದು ಅಸಹಾಯಕನಾಗಿ ಕುಳಿತಿದ್ದಾರೆ” ಎಂದು ಅಭಿಮಾನಿಗಳು ಮರುಗುತ್ತಿದ್ದಾರೆ. ಅನೇಕರು ಇದನ್ನು ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮಾ ಅವರ ಶಕೆಯ ಅಂತ್ಯ ಎಂದು ಬಣ್ಣಿಸುತ್ತಿದ್ದಾರೆ.
ಇದನ್ನೂ ಓದಿ: IPL 2026: ಐಪಿಎಲ್ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್!
ಒಟ್ಟಾರೆಯಾಗಿ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಕೇವಲ ಸೋಲನ್ನಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರನ ಕಣ್ಣಲ್ಲಿನ ನೋವನ್ನೂ ಉಣಬಡಿಸಿತು ಎಂದರೆ ತಪ್ಪಾಗಲಾರದು.