2027ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ದಿನಾಂಕ ನಿಗದಿಯಾಗಿದೆ. ಮುಂದಿನ ವರ್ಷದ ಜೂನ್ 18 ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಜುಲೈ 4 ರಂದು ಮಹಾ ಫೈನಲ್ ಪಂದ್ಯ ಜರುಗಲಿದೆ. ಇನ್ನು ಈ ಬಾರಿ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ್ ವಹಿಸಿಕೊಳ್ಳಲಿರುವುದು ಅಧಿಕೃತವಾಗಿದೆ. ಈ ಪಂದ್ಯಾವಳಿಯ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಏಕದಿನ ಮಾದರಿಯಲ್ಲಿ ಪಂದ್ಯಾವಳಿ:
ವಿಶ್ವಕಪ್ ಸರಣಿಗಳಿಗೆ ಅನುಗುಣವಾಗಿ ಏಷ್ಯಾ ಕಪ್ ಮಾದರಿಯನ್ನು ಬದಲಾಯಿಸಲಾಗುತ್ತದೆ. 2027ರ ಕೊನೆಯಲ್ಲಿ ಸೌತ್ ಆಫ್ರಿಕಾ/ಝಿಂಬಾಬ್ವೆ/ನಮೀಬಿಯಾದಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ನಡೆಯಲಿದ್ದು, ಅದಕ್ಕೆ ಪೂರ್ವಸಿದ್ಧತೆಯಾಗಿ 2027ರ ಏಷ್ಯಾ ಕಪ್ ಅನ್ನು ಕೂಡ 50 ಓವರ್‌ಗಳ ಏಕದಿನ ಮಾದರಿಯಲ್ಲೇ ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ.
3 ಸ್ಟೇಡಿಯಂಗಳಲ್ಲಿ ಪಂದ್ಯ:
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಮೂರು ಪ್ರಮುಖ ನಗರಗಳ ಕ್ರೀಡಾಂಗಣಗಳನ್ನು ಪ್ರಸ್ತಾಪಿಸಿದೆ. ಈ ಸ್ಟೇಡಿಯಂಗಳಿಗೆ ಎಸಿಸಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವುದು ಖಚಿತ ಎಂದು ವರದಿಯಾಗಿದೆ. ಆ ಸ್ಟೇಡಿಯಂಗಳೆಂದರೆ…
- ಮಿರ್ಪುರ್ (ಢಾಕಾ): ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
- ಚತ್ತೋಗ್ರಾಮ್: ಬೀರ್ ಶ್ರೇಷ್ಠ ಫ್ಲೈಟ್ ಲೆಫ್ಟಿನೆಂಟ್ ಮತಿಯುರ್ ರೆಹಮಾನ್ ಕ್ರೀಡಾಂಗಣ.
- ಸೈಲ್ಹೆಟ್: ಸೈಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
ಈ ಟೂರ್ನಿಯ ಫೈನಲ್ ಪಂದ್ಯವನ್ನು ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ.
ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿ:
ಈ ಬಾರಿಯ ಏಷ್ಯಾಕಪ್ನಲ್ಲೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳು ಲೀಗ್ ಹಂತದಲ್ಲೇ ಮುಖಾಮುಖಿಯಾಗಲಿದ್ದಾರೆ.
ಎಷ್ಟು ತಂಡಗಳು ಕಣಕ್ಕೆ?
ಏಷ್ಯಾದ ಅಗ್ರ 5 ಪೂರ್ಣಾವಧಿ ಸದಸ್ಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್ ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನು ಅರ್ಹತಾ ಸುತ್ತಿನಲ್ಲಿ ಗೆದ್ದು ಬರುವ ಒಂದು ಅಸೋಸಿಯೇಟ್ ತಂಡ ಸೇರಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ.
ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!
11 ವರ್ಷಗಳ ನಂತರ ಬಾಂಗ್ಲಾದಲ್ಲಿ ಟೂರ್ನಿ:
ಬಾಂಗ್ಲಾದೇಶವು ಕೊನೆಯದಾಗಿ 2016 ರಲ್ಲಿ ಏಷ್ಯಾ ಕಪ್ (ಟಿ20 ಮಾದರಿ) ಆಯೋಜಿಸಿತ್ತು. ಈಗ ಸುದೀರ್ಘ 11 ವರ್ಷಗಳ ಬಳಿಕ ಮತ್ತೆ ಆತಿಥ್ಯ ವಹಿಸಲು ಸಜ್ಜಾಗಿ ನಿಂತಿದೆ. ಅದರಂತೆ 2027ರ ಏಷ್ಯಾಕಪ್ ಏಕದಿನ ಟೂರ್ನಿಯು ಬಾಂಗ್ಲಾದೇಶ್ನಲ್ಲಿ ಜರುಗಲಿದೆ.