ಕಾರವಾರ, ಜುಲೈ 22: ಭಾರತೀಯ ನೌಕಾಪಡೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಐಎನ್ಎಸ್ ಮಾಲ್ವನ್ ಕಾರವಾರದ ಕದಂಬ ನೌಕಾನೆಲೆಯಲ್ಲಿ ಸೇರ್ಪಡೆಯಾಗಿದೆ. ಕೇರಳದ ಕೊಚ್ಚಿ ಶಿಪ್ಯಾರ್ಡ್ನಲ್ಲಿ ನಿರ್ಮಿಸಲಾದ ಐಎನ್ಎಸ್ ಮಾಲ್ವನ್ ಶೇಕಡಾ 80ರಷ್ಟು ಸ್ವದೇಶಿ ನಿರ್ಮಿತವಾಗಿದೆ. 78 ಮೀಟರ್ ಉದ್ದ, 11.2 ಮೀಟರ್ ಅಗಲ ಮತ್ತು 2.7 ಮೀಟರ್ ಆಳ ಹೊಂದಿರುವ ಈ ಯುದ್ಧ ನೌಕೆಯು 7 ಅಧಿಕಾರಿಗಳು ಮತ್ತು 57 ನಾವಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ (ASW) ಸಾಮರ್ಥ್ಯ. ಸಮುದ್ರದ ಆಳದಲ್ಲಿನ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ ನಾಶಪಡಿಸಲು ಅಗತ್ಯವಿರುವ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ಇದು ಹೊಂದಿದೆ. ಅಭಯ್ ಸೋನಾರ್ ವ್ಯವಸ್ಥೆಯು ಧ್ವನಿ ತರಂಗಗಳನ್ನು ಬಳಸಿ ಜಲಾಂತರ್ಗಾಮಿಗಳ ಇರುವಿಕೆಯನ್ನು ಗುರುತಿಸುತ್ತದೆ. ಸಮುದ್ರದ ಮೇಲ್ಮೈಯಲ್ಲಿ ಯುದ್ಧ ಮತ್ತು ಆತ್ಮರಕ್ಷಣೆಗಾಗಿ 30 ಮಿಲಿಮೀಟರ್ ನೇವೇಲ್ ಸರ್ಫೇಸ್ ಗನ್ ಅಳವಡಿಸಲಾಗಿದೆ. ಮಹಾರಾಷ್ಟ್ರದ ಮಾಲ್ವನ್ ಸಮೀಪದ ಸಿಂಧುದುರ್ಗ ಕೋಟೆ ಶಿವಾಜಿಯ ಮರಾಠ ನೌಕಾಪಡೆಯ ಪ್ರಮುಖ ಕೇಂದ್ರವಾಗಿದ್ದ ಕಾರಣ ಈ ನೌಕೆಗೆ ಮಾಲ್ವನ್ ಎಂದು ಹೆಸರಿಸಲಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್ ಅವರ ಸಮ್ಮುಖದಲ್ಲಿ ಈ ನೌಕೆಗೆ ಚಾಲನೆ ನೀಡಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.