2026 ರ ಐಪಿಎಲ್‌ನಲ್ಲಿ (IPL 2026) ಕಳಪೆ ಪ್ರದರ್ಶನದಿಂದಾಗಿ ಸತತ ಸೋಲುಗಳಿಗೆ ತುತ್ತಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಮತ್ತೆ ಲಯ ಕಂಡುಕೊಂಡಿದ್ದು, ಸತತ ನಾಲ್ಕನೇ ಪಂದ್ಯವನ್ನು ಗೆದ್ದುಕೊಂಡಿದೆ. ಅಜಿಂಕ್ಯ ರಹಾನೆ ನೇತೃತ್ವದ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ನಾಲ್ಕನೇ ಗೆಲುವು ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆರಂಭಿಕ ಆಟಗಾರ ಫಿನ್ ಅಲೆನ್ ಕೇವಲ 47 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದರು. ಈ ಮೂಲಕ 11 ವರ್ಷಗಳ ನಂತರ ಐಪಿಎಲ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಒಬ್ಬ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ ಫಿನ್ ಅಲೆನ್ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರೈಸಿದರು. ತಮ್ಮ ಇನ್ನಿಂಗ್ಸ್ನಲ್ಲಿ ಅಲೆನ್ ಐದು ಬೌಂಡರಿಗಳು ಹಾಗೂ10 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಅವರು ಐಪಿಎಲ್‌ನಲ್ಲಿ ಶತಕ ಗಳಿಸಿದ ಎರಡನೇ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರಿಗಿಂತ ಮೊದಲು, ಬ್ರೆಂಡನ್ ಮೆಕಲಮ್ 2008 ರಲ್ಲಿ ಮತ್ತು 2015 ರಲ್ಲಿ ಶತಕಗಳು ಬಾರಿಸಿದ್ದರು.
ಐಪಿಎಲ್‌ನಲ್ಲಿ ದಾಖಲಾಗಿರುವ ಶತಕಗಳೆಷ್ಟು?
ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಎಷ್ಟು ಶತಕಗಳು ದಾಖಲಾಗಿವೆ?. ಹಾಗೆಯೇ ಯಾವ ದೇಶದ ಆಟಗಾರರು ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ? ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿ ಮೂಡಿರುತ್ತದೆ. ಅಂತಹ ಪ್ರಶ್ನೆಗೆ ಉತ್ತರ ಇಲ್ಲಿದೆ. ಮೊದಲ ಪ್ರಶ್ನೆಗೆ ಉತ್ತರ 122. ಅಂದರೆ ಐಪಿಎಲ್ ಇತಿಹಾಸದ ಮೊದಲ ಪಂದ್ಯದಿಂದ ಇಲ್ಲಿಯವರೆಗೆ ಒಟ್ಟು 122 ಶತಕಗಳು ದಾಖಲಾಗಿವೆ. ಆಶ್ಚರ್ಯಕರವೆಂದರೆ, ಮೊದಲ ಶತಕ ಗಳಿಸಿದ ಮೆಕಲಮ್‌ನ ದೇಶವಾದ ನ್ಯೂಜಿಲೆಂಡ್‌ನಿಂದ ಕೇವಲ 3 ಶತಕಗಳು ಮಾತ್ರ ದಾಖಲಾಗಿವೆ, ಅದರಲ್ಲಿ 2 ಶತಕಗಳು ಮೆಕಲಮ್ ಬ್ಯಾಟ್ನಿಂದ ಸಿಡಿದಿವೆ. ಎರಡನೇ ಪ್ರಶ್ನೆಗೆ ಉತ್ತರಕ್ಕೆ ಸಂಬಂಧಿಸಿದಂತೆ, ಊಹಿಸುವುದು ಕಷ್ಟವೇನಲ್ಲ. ಇದು ಭಾರತೀಯ ಟಿ20 ಲೀಗ್ ಆಗಿರುವುದರಿಂದ, ಸ್ಪಷ್ಟವಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ.
ಕಿಂಗ್ ಕೊಹ್ಲಿ ವಿಕೆಟ್ ಕಿತ್ತ ಯುವ ವೇಗಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ
ಯಾವ ದೇಶದಿಂದ ಎಷ್ಟು ಶತಕ?
ಐಪಿಎಲ್‌ನಲ್ಲಿ ಇದುವರೆಗೆ ದಾಖಲಾಗಿರುವ ಒಟ್ಟು 122 ಶತಕಗಳಲ್ಲಿ 63 ಶತಕಗಳನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ಸಿಡಿಸಿದ್ದಾರೆ. ಇದರಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 8 ಶತಕಗಳನ್ನು ಬಾರಿಸಿದರೆ, ಕೆಎಲ್ ರಾಹುಲ್ 6 ಮತ್ತು ಸಂಜು ಸ್ಯಾಮ್ಸನ್ 5 ಶತಕಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, ಈ ದೇಶದ ಬ್ಯಾಟ್ಸ್‌ಮನ್‌ಗಳು 20 ಶತಕಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್ 14 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಇದರಲ್ಲಿ ಅರ್ಧ ಅಂದರೆ 7 ಶತಕಗಳನ್ನು ಜೋಸ್ ಬಟ್ಲರ್ ಮಾತ್ರ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ (12 ಶತಕಗಳು) ನಾಲ್ಕನೇ ಸ್ಥಾನದಲ್ಲಿದೆ. ಇವುಗಳನ್ನು ಹೊರತುಪಡಿಸಿ, ವೆಸ್ಟ್ ಇಂಡೀಸ್ ಪರ 6 ಶತಕಗಳು ದಾಖಲಾಗಿದ್ದು ಇವೆಲ್ಲ ಕ್ರಿಸ್ ಗೇಲ್ ಹೆಸರಿನಲ್ಲಿವೆ. ಇನ್ನು ಶ್ರೀಲಂಕಾದಿಂದ 2 ಶತಕಗಳು ಸಿಡಿದಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:31 pm, Sat, 9 May 26