ಐಪಿಎಲ್ ಮುಗಿಯುತ್ತಿದ್ದಂತೆ ಸಿನಿ ಹಬ್ಬ ಶುರು; ಈ ವಾರ ಥಿಯೇಟರ್​ನಲ್ಲಿ ಬಿಗ್ ಫೈಟ್ – Kannada News

ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಹಬ್ಬ ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ, ಪ್ರೇಕ್ಷಕರು ಮತ್ತೆ ಸಿನಿಮಾ ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಐಪಿಎಲ್ ಕ್ರೇಜ್‌ನಿಂದಾಗಿ ಇಷ್ಟು ದಿನ ದೊಡ್ಡ ಸಿನಿಮಾಗಳ ಬಿಡುಗಡೆ ಕೊಂಚ ಕಮ್ಮಿಯಾಗಿತ್ತು. ಆದರೆ ಈಗ ಕ್ರಿಕೆಟ್ ಜ್ವರ ಇಳಿಯುತ್ತಿದ್ದಂತೆ ಬಾಕ್ಸ್ ಆಫೀಸ್‌ನಲ್ಲಿ ಅಸಲಿ ಜಟಾಪಟಿ ಆರಂಭವಾಗಿದೆ. ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸೌತ್ ಮತ್ತು ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಅಪ್ಪಳಿಸುತ್ತಿದ್ದು, ಸಿನಿಮಾ ಪ್ರೇಮಿಗಳಿಗೆ ಜೂನ್ ತಿಂಗಳ ಆರಂಭದಲ್ಲೇ ಭರಪೂರ ಮನರಂಜನೆಯ ಹಬ್ಬ ಸಿಗಲಿದೆ.

‘ಮ್ಯಾಂಗೋ ಪಚ್ಚ’

ಕಿಚ್ಚ ಸುದೀಪ್ ಅಳಿಯ ಸಂಜಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಜೂನ್ 5ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಅನ್ನು ಸುದೀಪ್ ಪತ್ನಿ ಪ್ರಿಯಾ ನಿರ್ಮಾಣ ಮಾಡಿದ್ದಾರೆ. ಭಿನ್ನವಾದ ಶೀರ್ಷಿಕೆ ಮತ್ತು ವಿಭಿನ್ನವಾದ ಕಥಾಹಂದರ ಹೊಂದಿರುವ ಈ ಚಿತ್ರವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾ ಕೌಟುಂಬಿಕ ಡ್ರಾಮಾ ಮತ್ತು ಮನರಂಜನೆಯ ಅಂಶಗಳನ್ನು ಒಳಗೊಂಡಿದೆ. ದೊಡ್ಡ ಕಮರ್ಷಿಯಲ್ ಚಿತ್ರಗಳ ಪೈಪೋಟಿಯ ನಡುವೆಯೂ ತನ್ನ ಕಂಟೆಂಟ್ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ.

ಪೆದ್ದಿ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿರುವ ‘ಪೆದ್ದಿ’ ಸಿನಿಮಾ ಈ ವಾರದ ಅತ್ಯಂತ ದೊಡ್ಡ ಆಕರ್ಷಣೆಯಾಗಿದೆ. ‘ಆರ್​​ಆರ್​ಆರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಉತ್ತರ ಭಾರತದಲ್ಲೂ ರಾಮ್ ಚರಣ್ ಅವರಿಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದ್ದು, ಈ ಚಿತ್ರವು ಹಿಂದಿಯಲ್ಲೂ ಅತ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್, ಕನ್ನಡದ ನಟ ಶಿವರಾಜ್​​ಕುಮಾರ್ ಅಭಿನಯಿಸಿದ್ದಾರೆ. ಬುಚ್ಚಿ ಬಾಬು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ

ಹೈ ಜವಾನಿ ತೋ ಇಷ್ಕ್ ಹೋನಾ ಹೈ

ಬಾಲಿವುಡ್‌ನ ಖ್ಯಾತ ಹಿರಿಯ ನಿರ್ದೇಶಕ ಡೇವಿಡ್ ಧವನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಂಪೂರ್ಣ ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿದೆ. ವರುಣ್ ಧವನ್, ಮೃಣಾಲ್ ಠಾಕೂರ್ ಹಾಗೂ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಜೂನ್ 5 ರಂದು ತೆರೆಗೆ ಬರುತ್ತಿದೆ. ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾದ ಹಿಂದಿ ಬಿಡುಗಡೆಯ ಭೀತಿಯ ನಡುವೆಯೇ, ಮೊದಲ ದಿನವೇ ಪ್ರೇಕ್ಷಕರನ್ನು ಸೆಳೆಯಲು ಬುಕ್‌ಮೈಶೋನಲ್ಲಿ ಟಿಕೆಟ್ ದರದಲ್ಲಿ ಬರೋಬ್ಬರಿ 50% ರಷ್ಟು ಭರ್ಜರಿ ರಿಯಾಯಿತಿ ಆಫರ್ ಅನ್ನು ಚಿತ್ರತಂಡ ಘೋಷಿಸಿದೆ. ಸತತ ಸೋಲುಗಳಿಂದ ಕಂಗಾಲಾಗಿರುವ ಪೂಜಾ ಹೆಗ್ಡೆ ಅವರಿಗೆ ಈ ಸಿನಿಮಾ ಬಾಲಿವುಡ್‌ನಲ್ಲಿ ಮರುಜೀವ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *