ಕನ್ನಡ ಬಿಗ್ಬಾಸ್ (Kannada Bigg Boss) ಮತ್ತು ಪೊಲೀಸರಿಗೆ ಬಲು ಆಪ್ತ ನಂಟು. ಆಗೊಮ್ಮೆ, ಈಗೊಮ್ಮೆ ಪೊಲೀಸರು ಬಿಗ್ಬಾಸ್ ಶೋಗೆ ನೊಟೀಸ್ ನೀಡುವುದು, ಬಿಗ್ಬಾಸ್ ಮನೆ ಪ್ರವೇಶಿಸಿ ಸ್ಪರ್ಧಿಯ ಬಂಧಿಸುವುದು ಸಹ ನಡೆದಿದೆ. ಸೀಸನ್ ಒಂದರಲ್ಲಿ ಸ್ಪರ್ಧಿ ಆಗಿದ್ದ ವರ್ತೂರು ಸಂತೋಶ್ ಅನ್ನು ಬಂಧಿಸಿದ್ದರು, ಕೆಲ ಸಮಯದಲ್ಲಿ ನೊಟೀಸ್ಗಳನ್ನು ಸಹ ನೀಡಿದ್ದರು. ಆದರೆ ಇದೀಗ ಪೊಲೀಸ್ ಅಧಿಕಾರಿಯೊಬ್ಬರು, ತನ್ನನ್ನು ಈ ಬಾರಿ ಬಿಗ್ಬಾಸ್ ಸ್ಪರ್ಧಿಯಾಗಿ ಸೇರಿಸಿಕೊಳ್ಳಿ, ನನಗೆ ಬಿಗ್ಬಾಸ್ ಸ್ಪರ್ಧಿಯಾಗಿ ಹೋಗಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸಮವಸ್ತ್ರ ಧರಿಸಿಕೊಂಡು ವಿಡಿಯೋ ಸಹ ಮಾಡಿ ಹಂಚಿಕೊಂಡಿದ್ದಾರೆ. ಆದರೆ ಇದು ನಡೆದಿರುವುದು ಕರ್ನಾಟಕದಲ್ಲಿ ಅಲ್ಲ ಬದಲಿಗೆ ನೆರೆಯ ಆಂಧ್ರ ಪ್ರದೇಶದಲ್ಲಿ.
ತೆಲುಗು ಬಿಗ್ಬಾಸ್ನ ಹೊಸ ಸೀಸನ್ ಆರಂಭವಾಗುತ್ತಿದೆ. ಇದೀಗ ಸ್ಪರ್ಧಿಗಳ ಆಯ್ಕೆ ಚಾಲ್ತಿಯಲ್ಲಿದೆ. ಕನ್ನಡದಲ್ಲಿ ಈ ಬಾರಿ ಜನ ಸಾಮಾನ್ಯರನ್ನು ಬಿಗ್ಬಾಸ್ ಮನೆಗೆ ಸ್ಪರ್ಧಿಗಳಾಗಿ ಕಳಿಸಲಾಗುತ್ತಿದೆ, ಅಂತೆಯೇ ತೆಲುಗು ಬಿಗ್ಬಾಸ್ನಲ್ಲಿ ಸಹ ಸೆಲೆಬ್ರಿಟಿಗಳಲ್ಲದವರಿಗೂ ಅವಕಾಶ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರು, ತಮ್ಮನ್ನು ಬಿಗ್ಬಾಸ್ ಮನೆಗೆ ಕಳಿಸಿ ಎಂದು ಮನವಿ ಮಾಡುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆ, ಗದಿವೇಮುಲದ ಪೊಲೀಸ್ ಠಾಣೆಯ ಎಸ್ಐ ಆಗಿರುವ ನಾಗಾರ್ಜುನ ರೆಡ್ಡಿ ಎಂಬುವರು ಇದೀಗ ತೆಲುಗು ಬಿಗ್ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಅವಕಾಶ ನೀಡಬೇಕು ಎಂದು ಬಿಗ್ಬಾಸ್ ಆಯೋಜಕರಲ್ಲಿ ಕೇಳಿ ಕೊಂಡಿದ್ದಾರೆ. ಸಮವಸ್ತ್ರ ಧರಿಸಿ ವಿಡಿಯೋ ಮಾಡಿರುವ ನಂದೀಶ್ ರೆಡ್ಡಿ, ‘ಬಿಗ್ಬಾಸ್ ಮನೆಗೆ ಹೋಗಿ, ನನ್ನ ನಿಜ ವ್ಯಕ್ತಿತ್ವ, ನನ್ನಲ್ಲಿರುವ ಪ್ರತಿಭೆಯನ್ನು ಜನರಿಗೆ ತೋರಿಸಬೇಕು ಎಂಬುದು ನನ್ನ ಆಸೆ, ಹಾಗಾಗಿ ನನಗೆ ಒಂದು ಅವಕಾಶ ಕೊಡಬೇಕು’ ಎಂದು ಆಯೋಜಕರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
‘ತೆಲುಗು ಬಿಗ್ಬಾಸ್ ಕೇವಲ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರವೇ ಅಲ್ಲದೆ ಗ್ರಾಮೀಣ ಪ್ರತಿಭಾವಂತರಿಗೂ ಸಹ ಅವಕಾಶ ನೀಡುತ್ತಾ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ. ನಾನೂ ಸಹ ಗ್ರಾಮೀಣ ಭಾಗದವನಾಗಿದ್ದು, ನನಗೆ ಅವಕಾಶ ಕೊಟ್ಟಲ್ಲಿ, ನನ್ನ ಧೈರ್ಯ, ಆತ್ಮವಿಶ್ವಾಸ ಮತ್ತು ಪ್ರತಿಭೆಯಿಂದ ನಾನು ಆಟವಾಡಿ ರಾಜ್ಯದ ಜನರ ಗಮನ ಸೆಳೆಯುತ್ತೇನೆ. ವಿಜೇತನಾಗುವ ವಿಶ್ವಾಸವೂ ನನ್ನಲ್ಲಿದೆ’ ಎಂದಿದ್ದಾರೆ.
Nagarjuna Reddy, SI from Gadivemula, Nadyal District, Andhra Pradesh shared a selfie video asking for a chance in Big Boss season 10.
Is it allowed to make such videos in uniform? pic.twitter.com/8bM6Q6fGtX
— Revathi (@revathitweets) June 25, 2026
ಇದೀಗ ಈ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ಕೆಲವರು ಈ ಅಧಿಕಾರಿಗೆ ಅವಕಾಶ ಕೊಡಬೇಕು ಎಂದು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಹೀಗೆ ಸಮವಸ್ತ್ರ ಧರಿಸಿ ವಿಡಿಯೋ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳು ಹೀಗೆ ಖಾಸಗಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಪ್ರಶ್ನೆಯನ್ನು ಸಹ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ